ಮಧ್ಯಪ್ರದೇಶ: ಪ್ರಯಾಗ್ರಾಜ್ನ ಮಹಾ ಕುಂಭ ಮೇಳಕ್ಕೆ ತೆರಳಿ ಹಿಂದಿರುಗುತ್ತಿದ್ದ ಬೆಳಗಾವಿ ಗೋಕಾಕ್ ನಗರದ 6 ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ.
ಮಧ್ಯಪ್ರದೇಶದ ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ಇಂದು ಮುಂಜಾನೆ 4.30ರ ಸುಮಾರಿಗೆ ಕ್ರೂಸರ್ ವಾಹನ ಹಾಗೂ ಬಸ್ ನಡುವೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ 6 ಮಂದಿ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಬಲ್ಪುರದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ ಗೌಡರ (50), ಸುನೀಲ್ ಶೇಡಶ್ಯಾಳೆ (45), ಬಸವರಾಜ್ ಕುರ್ತಿ (63), ಬಸವರಾಜ್ ದೊಡಮಾಳ್ (49), ಈರಣ್ಣ ಶೇಬಿನಕಟ್ಟಿ (27), ವಿರೂಪಾಕ್ಷ ಗುಮತಿ (61) ಮೃತರು ದುರ್ದೈವಿಗಳು. ಹಾಗೂ ಗಂಭೀರವಾಗಿ ಮುಸ್ತಾಕ್ ಶಿಂಧಿಕುರಬೇಟ, ಸದಾಶಿವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗೋಕಾಕ್ನಿಂದ ಕ್ರೂಸರ್ ವಾಹನದಲ್ಲಿ ಭಕ್ತರು ಪ್ರಯಾಗ್ರಾಜ್ನ ಮಹಾಕುಂಭಮೇಳಕ್ಕೆ ತೆರಳುತ್ತಿದ್ದರು. ವರದಿಗಳ ಪ್ರಕಾರ ಕ್ರೂಸರ್ ವಾಹನ ಭಕ್ತರನ್ನು ಹೊತ್ತೊಯ್ಯುತ್ತಿದ್ದಂತೆ ಬಸ್ ಕೂಡ ಭಕ್ತರನ್ನು ಹೊತ್ತೊಯ್ಯುತ್ತಿತ್ತು. ಈ ಸಂದರ್ಭ ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಸ್ಗೆ ಡಿಕ್ಕಿ ಹೊಡೆದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಸಿಹೋರಾ-ಖಿಟೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಅಪಘಾತದ ಕಾರಣದ ಬಗ್ಗೆ ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ.
ಮಹಾ ಕುಂಭಮೇಳಕ್ಕೆ ತೆರಳುತ್ತಿರುವ ಅಥವಾ ಮಾಹಾ ಕುಂಭಮೇಳದಿಂದ ಮರಳುತ್ತಿರುವ ಭಕ್ತರ ವಾಹನಗಳು ಇತ್ತೀಚಿನ ದಿನಗಳಲ್ಲಿ ಅಪಘಾತಕ್ಕೀಡಾಗುತ್ತಲೇ ಇವೆ. ಇದೀಗ ಕಳೆದ 10 ದಿನಗಳಲ್ಲಿ ನಡೆದ 9 ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 26 ಭಕ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.