ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಆರಂಭಿಕ ಭಾಷಣದ ವೇಳೆ ಘೋಷಣೆಗಳನ್ನು ಕೂಗಿದ ಕಾರಣದಿಂದ ವಿರೋಧ ಪಕ್ಷದ ನಾಯಕಿ ಆತಿಶಿ ಸೇರಿಸಂತೆ ಎಎಪಿಯ 12 ಮಂದಿ ಶಾಸಕರನ್ನು ದೆಹಲಿ ವಿಧಾನಸಭೆಯಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ಆತಿಶಿ, ಗೋಪಾಲ್ ರಾಯ್, ವೀರ್ ಸಿಂಗ್ ಧಿಂಗನ್, ಮುಖೇಶ್ ಅಹ್ಲಾವತ್, ಚೌಧರಿ ಜುಬೇರ್ ಅಹ್ಮದ್, ಅನಿಲ್ ಝಾ, ವಿಶೇಷ್ ರವಿ ಮತ್ತು ಜರ್ನೈಲ್ ಸಿಂಗ್ ಅವರನ್ನು ದೆಹಲಿ ವಿಧಾನಸಭೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಸದನದಿಂದ ಹೊರಹಾಕಿದ್ದಾರೆ.
ನೂತನ ಸಿಎಂ ರೇಖಾ ಗುಪ್ತಾ ಅವರ ಕಚೇರಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಗತ್ಸಿಂಗ್ ಅವರ ಛಾಯಾಚಿತ್ರಗಳನ್ನು ತೆಗೆದುಹಾಕಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಎಎಪಿ ಶಾಸಕರು ‘ಜೈ ಭೀಮ್’ ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್ ಮತ್ತು ಭಗತ್ಸಿಂಗ್ ಅವರ ಛಾಯಾಚಿತ್ರಗಳನ್ನು ಹಿಡಿದು ಪ್ರತಿಭಟಿಸಿದರು. ಈ ಛಾಯಾಚಿತ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರಗಳೊಂದಿಗೆ ಬದಲಾಯಿಸಲಾಗಿದೆ ಎಂದು ಎಎಪಿ ಶಾಸಕರು ಆರೋಪಿಸಿದ್ದಾರೆ.