ಚಿತ್ರದುರ್ಗ; “ಭಾರತದ ಸಂಜಾತರಿಗೆ ಮಾತ್ರ ವಿಜ್ಞಾನದಲ್ಲಿ ಅನೇಕ ನೊಬೆಲ್ ಪ್ರಶಸ್ತಿಗಳು ದೊರೆತಿವೆ. ಆದರೆ ಇದುವರೆವಿಗೂ ಈ ದಶಕದಲ್ಲಿ ಸಿ.ವಿ.ರಾಮನ್ ರವರನ್ನು ಬಿಟ್ಟರೆ, ಬೇರೆ ಯಾವ ಭಾರತೀಯ ವಿಜ್ಞಾನಿಗೂ ನೊಬೆಲ್ ಪ್ರಶಸ್ತಿ ದೊರೆಯದಿರುವುದು ವಿಷಾದದ ಸಂಗತಿ” ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಶ್ರೀ ಚಳ್ಳಕೆರೆ ಯರ್ರಿಸ್ವಾಮಿ ಅಭಿಪ್ರಾಯಪಟ್ಟರು.
ಅವರು ಇಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಹಾಗೂ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.
“ಭಾರತದ ಅನೇಕ ಸಂಶೋಧನಾ ಕೇಂದ್ರಗಳಲ್ಲಿ ಬೆರಳೆಣಿಕೆಯ ವಿಜ್ಞಾನಿಗಳು ಮಾತ್ರ ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಇದನ್ನು ಗಮನಿಸಿದರೆ, ಆಳವಾದ ಅಧ್ಯಯನ, ಸಂಶೋಧನೆಗಳು, ನಡೆಯುತ್ತಿಲ್ಲ ಹಾಗೂ ಬದ್ಧತೆಯ ಕೊರತೆ ಎದ್ದು ಕಾಣಿಸುತ್ತಿದೆ. ನಾವು ಬ್ರಿಟಿಷರ ದಾಸ್ಯದಲ್ಲಿದ್ದಾಗ ನೊಬೆಲ್ ಪ್ರಶಸ್ತಿ ಬಂದಿರುವುದು ಗಮನಾರ್ಹ. ಭಾರತದ ಅಭಿವೃದ್ಧಿಗೆ ರಾಮನ್ ಬೆಳಕಿನ ಪರಿಣಾಮ ಮಹತ್ವದ ಸಂಶೋಧನೆಯಾಗಿದೆ ಎಂದರು.
ಇಂತಹ ಸಂಶೋಧನೆಯ ಮಹತ್ವ ಎಲ್ಲೆಡೆ ಪಸರಿಸಲಿ ಮತ್ತು ಇನ್ನಷ್ಟು ಹೊಸ ಸಂಶೋಧನೆಗಳು ನಡೆಯುವ ಉದ್ದೇಶದಿಂದ ರಾಷ್ಟ್ರೀಯ ವಿಜ್ಞಾನ ದಿನ ವನ್ನು ಆಚರಿಸಲು ತೀರ್ಮಾನಿಸಿದ್ದು ಸರಿಯಾಗಿಯೇ ಇದೆ” ಎಂದು ತಿಳಿಸಿದರು.
ಸಂಶೋಧನೆ ಮಾಡುವವರಲ್ಲಿ ಬದ್ಧತೆ ಇರಬೇಕು, ವಿಜ್ಞಾನದಿಂದ ಮಾತ್ರ ಬಡತನ, ದಾರಿದ್ರ್ಯವನ್ನು ತೊಲಗಿಸಲು ಸಾಧ್ಯ. ವಿಜ್ಞಾನವು ಎಲ್ಲರನ್ನೂ ಒಂದೆಡೆ ಸೇರಿಸುತ್ತದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದರಿಂದ ವೈಜ್ಞಾನಿಕ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಸೈನ್ಸ್ ಫೌಂಡೇಶನ್ ಅಧ್ಯಕ್ಷರಾದ ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪನವರು ಕಾರ್ಯಕ್ರಮ ಉದ್ಘಾಟಿಸಿದರು. ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರವಾಚಕ ಎ.ಹನುಮಂತರಾಯ, ಉಪನ್ಯಾಸಕರಾದ ಸಿ.ವಿಜಯಕುಮಾರ್, ನರಸಿಂಹಪ್ಪ, ರಾಜಣ್ಣ, ಎಲ್ಲಾ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಎಂ.ದೀಪ ಸ್ವಾಗತಿಸಿ, ಉಪನ್ಯಾಸಕಿ ಕೆ.ಬಿ.ಪುಷ್ಪಲತಾ ವಂದಿಸಿದರು. ಜೆ.ಚೇತನಾ ಕಾರ್ಯಕ್ರಮ ನಿರೂಪಿಸಿದರು.