ರಾಜ್ಯದ ಅಭಿವೃದ್ಧಿ ವೇಗ ಚುರುಕು, ಹಣಕಾಸು ಪರಿಸ್ಥಿತಿ ಮತ್ತಷ್ಟು ಸದೃಢ: ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

WhatsApp
Telegram
Facebook
Twitter
LinkedIn

ಬೆಂಗಳೂರು: ರಾಜ್ಯದ ಅಭಿವೃದ್ಧಿಯ ವೇಗವನ್ನು ಚುರುಕುಗೊಳಿಸುವುದರಲ್ಲಿ ಮತ್ತು ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೋಮವಾರ ಹೇಳಿದ್ದಾರೆ.

ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು, ಮಹಾತ್ಮಾ ಗಾಂಧಿಯವರು ಹೇಳಿದಂತೆ ಆಡಳಿತವನ್ನು ಅಂತಿಮ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವೆಂಬಂತೆ ಬಳಸಿಕೊಳ್ಳಲು ನನ್ನ ಸರ್ಕಾರ ಕಟಿಬದ್ಧವಾಗಿದೆ. ರಾಜ್ಯದ ಆದಾಯ ಹೆಚ್ಚುತ್ತಿದೆ. ರಾಜ್ಯಕ್ಕೆ ಖಾಸಗಿ ಬಂಡವಾಳ ದಾಖಲೆ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದಾಗಿ ಅಸಮಾನತೆಯ ತೀವ್ರತೆ ಕಡಿಮೆಯಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೆ ಸ್ಥಾನದಲ್ಲಿದೆ. ಜಿಎಸ್‌ಟಿ ಬೆಳವಣಿಗೆ ದರ ಉತ್ತಮವಾಗಿದೆ ಎಂದರು.

2024-25ನೇ ಸಾಲಿನ ಬಜೆಟ್‌ನಲ್ಲಿ ಆದೇಶ ಹೊರಡಿಸಬೇಕಾಗಿದ್ದ 344 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಘೋಷಣೆ ಮಾಡಿದ್ದ ಕಾರ್ಯಕ್ರಮಗಳೂ ಸಹ ಸಮರ್ಪಕವಾಗಿ ಅನುಷ್ಠಾನವಾಗುತ್ತಿವೆ. ಇನ್ನುಳಿದ ಘೋಷಣೆಗಳೂ ಆದೇಶ ಹೊರಡಿಸುವ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ತೀವ್ರರೂಪದ ಅತಿವೃಷ್ಟಿ ಅನಾವೃಷ್ಟಿಗಳಿಲ್ಲದ ಕಾರಣ ರೈತರ ಕೈಗೆ ಉತ್ತಮ ಫಸಲು ಸಿಕ್ಕಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಂದ ಸುಮಾರು 149 ಲಕ್ಷ ಟನ್ನುಗಳಷ್ಟು ಕೃಷಿ ಉತ್ಪಾದನೆ ನಿರೀಕ್ಷಿಸಲಾಗಿದೆ. ಸರ್ಕಾರವು ತೆಗೆದುಕೊಂಡ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದ ರೈತ ಕುಟುಂಬಗಳಲ್ಲಿ ಆತ್ಮಹತ್ಯೆಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ನನ್ನ ಸರ್ಕಾರವು ರಚನೆಯಾದಾಗಿಂದಲೂ ತೊಗರಿ ಮತ್ತು ಕೊಬ್ಬರಿಗೆ ಬೆಲೆಗಳು ಕುಸಿದಾಗ ರೈತರ ನೆರವಿಗೆ ನಿಂತು ಪ್ರೋತ್ಸಾಹ ಧನವನ್ನು ನೀಡಿದೆ. ಕೃಷಿಭಾಗ್ಯ ಯೋಜನೆಯನ್ನು ಮುಂದುವರೆಸುವ ಮೂಲಕ ಅಗತ್ಯ ಇರುವ ಕಡೆಗಳಲ್ಲೆಲ್ಲಾ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕವು ಹಾಲಿನ ಉತ್ಪಾದನೆಯಲ್ಲಿ ದಾಖಲೆ ಬರೆದಿದೆ. ಕೆಎಂಎಫ್ ಈ ಬಾರಿ ದಿನವೊಂದಕ್ಕೆ 1 ಕೋಟಿ ಲೀಟರ್‌ಗಳಷ್ಟು ಹಾಲನ್ನು ಸಂಗ್ರಹಿಸಿದೆ. ಹೈನೋದ್ಯಮಕ್ಕೆ ನೀಡುತ್ತಿರುವ ಪ್ರೋತ್ಸಾಹದ ಕಾರಣಕ್ಕಾಗಿಯೆ ಈ ಸಾಧನೆ ಸಾಧ್ಯವಾಗಿದೆ. ಸರ್ಕಾರವು ಇದುವರೆಗೆ ಪಶುಪಾಲಕರಿಗೆ 1500 ಕೋಟಿ ರೂ.ಗಳಷ್ಟು ಪ್ರೋತ್ಸಾಹಧನ ನೀಡಿದೆ. ಸರ್ಕಾರವು ಪಶುಪಾಲಕರ ನೆರವಿಗಾಗಿ ಅನುಗ್ರಹ ಯೋಜನೆಯನ್ನು ಮುಂದುವರೆಸಿದೆ. ಪ್ರಸಕ್ತ ಸಾಲಿನಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ 24934 ರಾಸುಗಳು ಹಾಗೂ 33373 ಕುರಿ ಮತ್ತು ಮೇಕೆಗಳಿಗೆ 26.60 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ನೀಡಿದೆ.

ಸಮಾಜವು ಸೋಷಿಯಲ್ ಡಾರ್ವಿನಿಸಂ ಕಡೆಗೆ ಹೋಗಬಾರದೆಂದು ನಮ್ಮ ಹಿರಿಯರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂಲಕ ಈ ದೇಶಕ್ಕೆ ಅತ್ಯಂತ ಮಾನವೀಯವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಸಂವಿಧಾನವು ಅಸಮಾನತೆಯನ್ನು ತಗ್ಗಿಸಿ ಆದಾಯದ ನ್ಯಾಯಯುತ ಪಾಲನ್ನು ಜನರಿಗೆ ಖಾತರಿಪಡಿಸಬೇಕೆಂದು ಹೇಳುತ್ತದೆ. ಈ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ವರ್ಷಕ್ಕೆ 52 ಸಾವಿರ ಕೋಟಿಗಳಿಗೂ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುತ್ತಿದೆ. ನನ್ನ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 5 ಗ್ಯಾರಂಟಿ ಯೋಜನೆಗಳಿಗಾಗಿ ರೂ.70,000 ಕೋಟಿ ಹಣವನ್ನು ನೇರವಾಗಿ ಜನರ ಖಾತೆಗಳಿಗೆ ವರ್ಗಾಯಿಸಿದೆ ಎಂದು ತಿಳಿಸಿದರು.

ಕಲ್ಯಾಣ ಕಾರ್ಯಕ್ರಮಗಳಿಗಾಗಿ ವರ್ಷಕ್ಕೆ ಒಟ್ಟಾರೆ 90 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗುತ್ತಿದೆ. ಸಾಮಾಜಿಕ ಪಿಂಚಣಿಗಳು, ರೈತರ ಪಂಪು ಸೆಟ್ಟುಗಳಿಗೆ ಉಚಿತ ವಿದ್ಯುತ್, ಕೃಷಿ-ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಮೀನುಗಾರಿಕೆ, ಆಹಾರ ಮತ್ತು ನಾಗರಿಕ ಸರಬರಾಜು, ಕೈಮಗ್ಗ ಮತ್ತು ಜವಳಿ, ವಸತಿ, ಶಿಕ್ಷಣ, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಹಲವಾರು ಇಲಾಖೆಗಳ ವತಿಯಿಂದ ನೀಡುವ ನೇರ ನಗದು ಯೋಜನೆಗಳು ಮತ್ತು ಸಬ್ಸಿಡಿ, ಪ್ರೋತ್ಸಾಹ ಧನಗಳಿಂದ ಸುಮಾರು 1.25 ಕೋಟಿಗೂ ಹೆಚ್ಚು ಕುಟುಂಬಗಳು ಅನುಕೂಲ ಪಡೆಯುತ್ತಿವೆ. ಅಭಿವೃದ್ಧಿಯಲ್ಲಿ ಕರ್ನಾಟಕದ ವಿಶಿಷ್ಟ ಮಾದರಿಯನ್ನು ಸರ್ಕಾರವು ರೂಪಿಸುತ್ತಿದೆ ಎಂದು ಅವರು ಅವರು ತಿಳಿಸಿದರು.

ಕರ್ನಾಟಕ ಮಾದರಿ ಅಭಿವೃದ್ಧಿಯೆಂದರೆ ಜನಕೇಂದ್ರಿತ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಡಳಿತವನ್ನು ರೂಪಿಸುವುದು ಎಂದರ್ಥ. ಹಸಿರು ಇಂಧನ, ಮಹಿಳಾ ಸಬಲೀಕರಣ ಮುಂತಾದವುಗಳೂ ಇದರಲ್ಲಿ ಸೇರುತ್ತವೆ. ಕರ್ನಾಟಕದ ಮಾದರಿಯನ್ನು ಜಗತ್ತಿನ ಅನೇಕ ಅರ್ಥಶಾಸ್ತ್ರಜ್ಞರು ಮತ್ತು ವಿಶ್ವವಿದ್ಯಾಲಯಗಳು ಅಧ್ಯಯನ ಮಾಡುತ್ತಿವೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಹ್ಯೂಮನ್ ರೈಟ್ಸ್ ಹಬ್‌ನ ಬ್ಲಾಗ್‌ನಲ್ಲಿ “ಶೈನಿಂಗ್ ಎ ಲೈಟ್ ಇನ್ ದ ಡಾರ್ಕ್‌ನೆಸ್” ಎಂದು ಮತ್ತು “ಎ ಬ್ಲ್ಯೂ ಪ್ರಿಂಟ್ ಫಾರ್ ದ ವರ್ಲ್ಡ್” ಎಂದು ಈ ಮಾದರಿಯನ್ನು ವ್ಯಾಖ್ಯಾನಿಸಿವೆ. ಈ ಪ್ರಮೇಯದ ಕುರಿತು ತಿಳಿದುಕೊಳ್ಳಲು ವಿಶ್ವ ಸಂಸ್ಥೆಯ ಮುಖ್ಯಸ್ಥರೆ ರಾಜ್ಯಕ್ಕೆ ಬಂದು ನಮ್ಮ ಯೋಜನೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon