ಬೆಂಗಳೂರು: ಸೌಹಾರ್ದತೆಗೆ ಒತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಜನರನ್ನು ಪ್ರೀತಿಯಿಂದ ಬರುವಂತೆ ಮಾಡಬೇಕು. ಭಯ ಪಡಿಸುವಂತಾಗಬಾರದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಮಂಗಳವಾರ ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಘಂಟಿಹೊಳೆ ಅವರು ಕರಾವಳಿ ಪ್ರವಾಸೋದ್ಯಮವನ್ನು ವಿಶೇಷ ಪ್ಯಾಕೇಜ್ ಎಂದು ಪರಿಗಣಿಸುವ ವಿಷಯವನ್ನು ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು, ರಾಜ್ಯದಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಸುಧಾರಿಸುವ ಪ್ರಸ್ತಾಪವನ್ನು ವಿವರಿಸಿದರು.
ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರುವ ಪ್ರಸ್ತಾವನೆ ಇಲ್ಲ. ಪ್ರವಾಸೋದ್ಯಮ ನೀತಿಯಲ್ಲೇ ಕರಾವಳಿ ಭಾಗದಲ್ಲಿನ ಎಲ್ಲಾ ವರ್ಗದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಕಲ್ಪಿಸಲಾಗಿದೆ. ಕರಾವಳಿ ಹಾಗೂ ಕಡಲತೀರ ಪ್ರದೇಶಕ್ಕೆ ವಿಶೇಷ ಮಹತ್ವ ನೀಡಲಾಗಿದೆ ಎಂದು ಹೇಳಿದರು.
ಕರಾವಳಿ ಅಭಿವೃದ್ಧಿ ಮಂಡಳಿ ರಚನೆ ಮಾಡುತ್ತೇವೆ. ಭೂ ಬ್ಯಾಂಕ್ ಮಾಡುತ್ತೇವೆ. ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. 320 ಕಿ.ಮೀ. ಉದ್ದದ ಕರಾವಳಿಯಲ್ಲಿ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಹಕ್ಕುಗಳ ವರ್ಗಾಯಿಸಲು ಅನುವು ಮಾಡಿಕೊಡಲಾಗಿದೆ. ಸಾಹಸ, ಪರಿಸರ ಸ್ನೇಹಿ ವಸತಿ, ಸಂಸ್ಕøತಿ ಸೇರಿದಂತೆ ಪ್ರವಾಸಿಗರಿಗೆ ಪೂರೈಸುವ ಸೌಲಭ್ಯಗಳನ್ನು ಸಮಗ್ರ ಕರಾವಳಿ ಪ್ರವಾಸೋದ್ಯಮ ವಲಯಗಳು ಒಳಗೊಂಡಿವೆ. ಕರಾವಳಿಯಲ್ಲಿ ಕನಿಷ್ಟ 10 ಬೃಹತ್ ಪ್ರವಾಸೋದ್ಯಮ ಯೋಜನೆಗಳ ಅಭಿವೃದ್ಧಿಗೆ ಯೋಜನೆ ಮಾಡಲಾಗುತ್ತಿದೆ. ಕರಾವಳಿ ಉತ್ಸವಗಳಿಗೆ ಉತ್ತೇಜನ ನೀಡಲಾಗುತ್ತಿದೆ.
ಕರಾವಳಿ ಕರ್ನಾಟಕದ ಯೋಜಿತ ಅಭಿವೃದ್ಧಿ ಯೋಜನೆ ಮತ್ತು ಸಿಆರ್ಜೆಡ್ ಮಾನದಂಡಗಳೊಂದಿಗೆ ಹೊಂದಾಣಿಕೆಗೆ ಒತ್ತು ನೀಡಲಾಗಿದೆ. ಹೀಗೆ 20 ಅಂಶಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಸಮುದ್ರದ ಮೇಲೆ ವಿಮಾನಗಳು ಇಳಿಸುವ ಬಗ್ಗೆ ಚಿಂತನೆ ನಡೆದಿದ್ದು, ರಷ್ಯಾದವರು ಆಸಕ್ತಿ ತೋರಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮಾತನಾಡಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಕರಾವಳಿ ಕರ್ನಾಟಕಕ್ಕೆ ದೇವರ ಆಶೀರ್ವಾದ ಉತ್ತಮವಾಗಿದೆ. ಎಲ್ಲಾ ಸೌಲಭ್ಯ ಇರುವ ಈ ಸ್ಥಳ ಯಾರಿಗೂ ಸಿಗುವುದಿಲ್ಲ. ಕರಾವಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಬಂದರುಗಳಿದ್ದು, ಆರೋಗ್ಯ, ಶಿಕ್ಷಣ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಅವಕಾಶವಿದೆ. ಆದರೆ, ಮಗಿರುವ ಏಕೈಕ ಸಮಸ್ಯೆ ಕೋಮು ಸಾಮರಸ್ಯ.
ಈ ಪ್ರದೇಶದಿಂದ ಆಯ್ಕೆಯಾದ ಶಾಸಕರು ಅದರ ಕಡೆಗೆ ಕೆಲಸ ಮಾಡಬೇಕು. ಸುಂದರ ಪರಿಸರ-ಪ್ರಕೃತಿ ಇದೆ. ಆದರೆ, ಕೋಮು ಸಾಮರಸ್ಯ ಇಲ್ಲದಿದ್ದರೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕೋಮು ಸಂಘರ್ಷಗಳಿದ್ದರೆ ಕರಾವಳಿಗೆ ಯಾರೂ ಭೇಟಿ ನೀಡುವುದಿಲ್ಲ. ಪ್ರವಾಸೋದ್ಯಮ ಕ್ಷೇತ್ರವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ನೀಡಿದರೂ ಸಹಾಯ ಮಾಡುವುದಿಲ್ಲ. ಹೀಗಾಗಿ ಸೌಹಾರ್ದತೆಗೆ ಒತ್ತು ಕೊಡುವ ಕೆಲಸವನ್ನು ಶಾಸಕರು, ನಾವು, ನೀವೆಲ್ಲಾ ಮಾಡಬೇಕು. ಜನರನ್ನು ಪ್ರೀತಿಯಿಂದ ಬರುವಂತೆ ಮಾಡಬೇಕು. ಭಯ ಪಡಿಸುವಂತಾಗಬಾರದು ಎಂದು ಸಲಹೆ ನೀಡಿದರು.