ನವದೆಹಲಿ: ಖಾಸಗಿ ಆಸ್ಪತ್ರೆಗಳು ರೋಗಿಗಳ ಮೇಲೆ ಔಷಧ ಖರೀದಿಗೆ ಒತ್ತಡ ಹೇರುವುದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಮಾರ್ಗಸೂಚಿ ಜಾರಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಕಾನೂನು ವಿದ್ಯಾರ್ಥಿ ಸಿದ್ಧಾರ್ಥ್ ದಾಲಿಯಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು “ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧ ಸಿಗಬೇಕು, ಖಾಸಗಿ ಆಸ್ಪತ್ರೆಗಳು ಲಾಭದ ಆಸೆಗಾಗಿ ರೋಗಿಗಳನ್ನು ಲೂಟಿ ಮಾಡಬಾರದು” ಎಂದು ತೀರ್ಪು ನೀಡಿದ್ದಾರೆ.
ರಾಜ್ಯ ಸರ್ಕಾರಗಳ ವಿಫಲತೆ:
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಎನ್.ಕೆ. ಸಿಂಗ್ ಅವರ ಪೀಠ “ಬಡವರು ಅಗತ್ಯ ವೈದ್ಯಕೀಯ ಸೇವೆ ಮತ್ತು ಔಷಧ ಖರೀದಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಸರ್ಕಾರಗಳು ಇದನ್ನು ನಿಯಂತ್ರಿಸುವಲ್ಲಿ ವಿಫಲವಾಗಿವೆ, ಇದರಿಂದ ಖಾಸಗಿ ಆಸ್ಪತ್ರೆಗಳ ಲೂಟಿಗೆ ಅವಕಾಶ ಸಿಕ್ಕಿದೆ” ಎಂದು ಗಂಭೀರ ಸೂಚನೆ ನೀಡಿದೆ.
ಸಂವಿಧಾನದ 21ನೇ ವಿಧಿಯ ಪ್ರಕಾರ ಆರೋಗ್ಯ ಸೌಲಭ್ಯಗಳ ಹಕ್ಕು:
ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಆರೋಗ್ಯ ಸೇವೆ ದೊರಕುವ ಹಕ್ಕಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಮೇಲೆ ನೇರ ಕ್ರಮ ಕೈಗೊಳ್ಳುವ ಬದಲಿಗೆ ಸರ್ಕಾರವೇ ಸೂಕ್ತ ಮಾರ್ಗಸೂಚಿ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.