ಕಲಬುರಗಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಜಗನ್ನಾಥ ಹಾಲಿಂಗೆ ಅವರಿಗೆ ಸಂಬಂಧಿಸಿದ ಆರು ಸ್ಥಳಗಳ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ನಗರದ ಎನ್ಜಿಒ ಕಾಲೊನಿಯಲ್ಲಿನ ಮನೆ, ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಸ್ವಗ್ರಾಮ ದನ್ನೂರ್ (ಕೆ), ಬೀದರ್ ನಗರದಲ್ಲಿನ ಮನೆ, ಬೆಂಗಳೂರಲ್ಲಿನ ಮನೆ ಹಾಗೂ ಕಚೇರಿಯಲ್ಲಿ ಲೋಕಾಯುಕ್ತ ಪೋಲಿಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಎನ್ಜಿಒ ಕಾಲೊನಿಯಲ್ಲಿನ ಮನೆಯಲ್ಲಿ ಎರಡು ಕೆ.ಜಿ.ಗೂ ಹೆಚ್ಚು ಬೆಳ್ಳಿ ಪತ್ತೆಯಾಗಿದೆ. ಜಗನ್ನಾಥ ದಂಪತಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಲಾಕರ್ಗಳ ಕೀ ಇಲ್ಲದ ಕಾರಣಕ್ಕೆ ಅವುಗಳನ್ನು ಹೊಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.