ಚೆನ್ನೈ: ಸ್ಯಾಂಡಲ್‌ವುಡ್‌ನ ಬ್ಯುಸಿ ನಟರಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ನಾಯಕನಾಗಿ ಮಾತ್ರವಲ್ಲ ಇದೀಗ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ಸ್ಯಾಂಡಲ್‌ವುಡ್‌ನ ʼಭೀಮʼ ಚಿತ್ರದಲ್ಲಿ ಅಭಿನಯಿಸುವ ಜತೆಗೆ ನಿರ್ದೇಶಕರಾಗಿಯೂ ಗಮನ ಸೆಳೆದಿದ್ದರು. ಸದ್ಯ ಹಲವು ಪ್ರಾಜೆಕ್ಟ್‌ಗಳಲ್ಲಿ ನಿರತರಾಗಿರುವ ಅವರು ಕಾಲಿವುಡ್‌ಗೂ ಕಾಲಿಟಿದ್ದಾರೆ.
ತಮಿಳಿನ ಸೂಪರ್ ಸ್ಟಾರ್ ನಯನತಾರಾ ಅಭಿನಯದ ಬಹು ನಿರೀಕ್ಷಿತ ಚಿತ್ರಕ್ಕೆ ವಿಜಯ್ ಆಯ್ಕೆಯಾಗಿದ್ದು, ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ. 2020ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದ ‘ಮೂಕುತ್ತಿ ಅಮ್ಮನ್’ ಸಿನಿಮಾದ ಮುಂದುವರಿದ ಭಾಗ ʼಮೂಕುತ್ತಿ ಅಮ್ಮನ್ 2ʼ ಸಿನಿಮಾ ಸೆಟ್ಟೇರಿದ್ದು, ಇದರಲ್ಲಿ ಮುಖ್ಯ ಪಾತ್ರದಲ್ಲಿ ನಯನತಾರಾ ಅವರೊಂದಿಗೆ ದುನಿಯಾ ವಿಜಯ್ ಮಿಂಚಲು ತಯಾರಾಗಿದ್ದಾರೆ.
5 ವರ್ಷಗಳ ಹಿಂದೆ ತೆರೆಕಂಡ ʼಮೂಕುತ್ತಿ ಅಮ್ಮನ್ʼ ಚಿತ್ರದಲ್ಲಿ ನಯನತಾರಾ ದೇವಿ ಅವತಾರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಸೀಕ್ವೆಲ್‌ನಲ್ಲಿಯೂ ಅವರು ದೇವಿಯಾಗಿಯೇ ಮುಂದುವರಿಯಲಿದ್ದಾರೆ. ‘ಮೂಕುತ್ತಿ ಅಮ್ಮನ್ 2’ ಚಿತ್ರಕ್ಕೆ ತಮಿಳು ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕ ಸುಂದರ್ ಸಿ. ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಅದೇನೇ ಇದ್ದರೂ ಪವರ್‌ಫುಲ್ ಪಾತ್ರದ ಮೂಲಕವೇ ಅವರು ಕಾಲಿವುಡ್‌ಗೆ ಕಾಲಿಡಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ʼ ʼದುನಿಯಾ ವಿಜಯ್ ಈ ಚಿತ್ರದಲ್ಲಿ ನೆಗೆಟಿವ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಕಥೆಗೆ ಬಹುಮುಖ್ಯ ತಿರುವು ನೀಡುವ ಪಾತ್ರ ಇದಾಗಿದ್ದು, ಖಂಡಿತವಾಗಿಯೂ ಪ್ರೇಕ್ಷಕರ ಗಮನ ಸೆಳೆಯಲಿದೆʼʼ ಎಂದು ನಿರ್ದೇಶಕ ಸುಂದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನಿತರ ಮುಖ್ಯ ಪಾತ್ರಗಳಲ್ಲಿ ರೆಜಿನಾ ಕೆಸಾಂಡ್ರಾ, ನಟಿ, ರಾಜಕಾರಣಿ ಖುಷ್ಬು ಸುಂದರ್, ಮೀನಾ, ಅಭಿನಯ, ಹಾಸ್ಯನಟ ಯೋಗಿ ಬಾಬು, ಇನಿಯಾ, ಗರುಡ ರಾಮ್ ಮತ್ತಿತರರು ನಟಿಸುತ್ತಿದ್ದಾರೆ. ಅದ್ಧೂರಿಯಾಗಿಯೇ ಚಿತ್ರ ನಿರ್ಮಾಣವಾಗಲಿದ್ದು, ಬಜೆಟ್ ಸುಮಾರು 100 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ʼಮೂಕುತ್ತಿ ಅಮ್ಮನ್ʼ ಚಿತ್ರವನ್ನು ಆರ್.ಜೆ ಬಾಲಾಜಿ ಮತ್ತು ಎನ್.ಜೆ.ಶರವಣನ್ ನಿರ್ದೇಶಿಸಿದ್ದರು. ಭಕ್ತ ಮತ್ತು ದೇವಿಯ ಕಥೆಯನ್ನು ಒಳಗೊಂಡ ಈ ಚಿತ್ರ ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ನಯನತಾರಾ ಜತೆಗೆ ಆರ್.ಜೆ.ಬಾಲಾಜಿ, ಊರ್ವಶಿ, ಸ್ಮೃತಿ ವೆಂಕಟ್, ಅಜಯ್ ಘೋಷ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸೀಕ್ವೆಲ್‌ಗೆ ದುನಿಯಾ ವಿಜಯ್ ಎಂಟ್ರಿಯಾಗಿದ್ದು ನಿರೀಕ್ಷೆ ಹೆಚ್ಚಿಸಿದೆ.
ಹಾಗೆ ನೋಡಿದರೆ ವಿಜಯ್ ಪರಭಾಷೆಯಲ್ಲಿ ನಟಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆ ಅವರು ಅವರು 2023ರಲ್ಲಿ ಬಿಡುಗಡೆಯಾದ ʼವೀರ ಸಿಂಹ ರೆಡ್ಡಿʼ ತೆಲುಗು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ನಂದಮೂರಿ ಬಾಲಕೃಷ್ಣ, ವರಲಕ್ಷ್ಮೀ ಶರತ್‌ಕುಮಾರ್, ಶ್ರುತಿ ಹಾಸನ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ವಿಜಯ್ ಮಿಂಚಿದ್ದರು. ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೆ ಫಿಲ್ಮ್‌ಫೇರ್ ಪ್ರಶಸ್ತಿಗೂ ಭಾಜನರಾಗಿದ್ದರು. ಇದೀಗ ಕಾಲಿವುಡ್‌ನಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.