ತುಮಕೂರು: ಲಸಿಕೆ ಹಾಕಿಸಿಕೊಂಡ ಕೆಲವೇ ಗಂಟೆಯಲ್ಲಿ ಮಗು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮಾಗೋಡು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಕೀರ್ತನಾ ಮತ್ತು ಲಕ್ಷ್ಮಿಕಾಂತ್ ದಂಪತಿಯ 5 ತಿಂಗಳ ಹೆಣ್ಣು ಮಗು ಮೃತಪಟ್ಟಿದೆ. ಮಗುವಿಗೆ ರೋಟ್ -2 ಲಸಿಕೆಯನ್ನು ಗುರುವಾರ ಬೆಳಗ್ಗೆ 11:30 ಸುಮಾರಿಗೆ ಹಾಕಿಸಲಾಗಿತ್ತು.
ನಂತರ ನಿದ್ದೆಗೆ ಜಾರಿದ ಮಗು ಮಧ್ಯಾಹ್ನ 3:30ರ ಸುಮಾರಿಗೆ ಭೇದಿಯಾಗಿ ಅಸ್ವಸ್ಥಗೊಂಡಿದೆ. ಕೂಡಲೇ ಮಗುವನ್ನು ಶಿರಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಪರಿಶೀಲಿಸಿದ ವೈದ್ಯರು ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಆದರೆ, ತುಮಕೂರಿನ ಖಾಸಗಿ ಆಸ್ಪತ್ರೆಗೆ ಬರುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ಗೊತ್ತಾಗಿದೆ. ಮಗುವಿನ ಪೋಷಕರು ಶಿರಾ ನಗರ ಠಾಣೆಗೆ ದೂರು ನೀಡಿದ್ದಾರೆ.