ಬೆಳಗಾವಿ : ನರ್ಸಿಂಗ್ ಓದುತ್ತಿದ್ದ ಯುವತಿಯನ್ನು ಕಿಡ್ನ್ಯಾಪ್ ಮಾಡಿದ ಆರೋಪ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮುಂಬೈಗೆ ಓಡಿಹೋದ ಪ್ರೇಮಿಗಳನ್ನು ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡು ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಾನು ಯುವತಿಯನ್ನು ಕಿಡ್ನ್ಯಾಪ್ ಮಾಡಿರಲಿಲ್ಲ, ಇಬ್ಬರು ಪರಸ್ಪರ ಒಪ್ಪಿ ಓಡಿ ಹೋಗಿದ್ದೇವೆ ಎಂದು ಯುವಕ ಸದ್ರುದ್ದೀನ್ ಹೇಳಿದ್ದಾನೆ.
ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು, ಸ್ವಇಚ್ಚೆಯಿಂದ ಓಡಿ ಹೋಗಿದ್ದೇವೆ ಎಂದು ಹೇಳಿದ್ದಾರೆ. ಇಬ್ಬರ ಹೇಳಿಕೆ ಪಡೆದ ಪೊಲೀಸರು ಯುವತಿಯನ್ನು ಯುವಕನ ಜೊತೆ ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಬಸ್ತವಾದ ಗ್ರಾಮದ ರಾಧಿಕಾ ಮುಚ್ಚಂಡಿ ಎಂಬ ಯುವತಿಯನ್ನು ಅನ್ಯಕೋಮಿನ ಯುವಕ ಸದ್ರುದ್ದೀನ್ ಕಿಡ್ನ್ಯಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು, ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸದ್ರುದಿನ್ ಯುವತಿಯನ್ನು ಅಪಹರಿಸಿ ಕರೆದೊಯ್ದಿದ್ದಾನೆ ಎನ್ನಲಾಗಿತ್ತು, ಈ ಹಿನ್ನೆಲೆ ಆಕ್ರೋಶಗೊಂಡ ಯುವತಿ ಕುಟುಂಬಸ್ಥರು ಯುವಕನ ಮನೆ ವಿರುದ್ಧ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರ ಹಾಕಿದ್ದರು. ಸದ್ರುದ್ದೀನ್ ಮತ್ತು ನರ್ಸಿಂಗ್ ಓದುತ್ತಿದ್ದ ರಾಧಿಕಾ ನಡುವೆ ಸ್ನೇಹ ಬೆಳೆದಿತ್ತು, ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಈ ವಿಚಾರ ತಿಳಿದ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತಿಳಿದ ಸದ್ರುದ್ದೀನ್ ಯುವತಿಯ ಜೊತೆಗೆ ಪರಾರಿಯಾಗಿದ್ದನು ಎನ್ನಲಾಗಿದೆ.