ಚಿತ್ರದುರ್ಗ : ಜಿಲ್ಲೆಯ ಗ್ರಾಮೀಣ ಪ್ರದೇಶಗಳು, ಗುಡ್ಡಗಾಡು ಸ್ಥಳಗಳು ಹಾಗೂ ಕಟ್ಟಕಡೆಯ ಗಡಿಭಾಗದ ಪ್ರದೇಶಗಳ ರೈತರ ಅನುಕೂಲಕ್ಕಾಗಿಯೇ ಸರ್ಕಾರ ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಒದಗಿಸಿದ್ದು, ಜಿಲ್ಲೆಯ ಜಾನುವಾರು ಸಾಕಾಣಿಕೆದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುರ್ತು ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ಹಾಗೂ ಗುಡ್ಡಗಾಡು ಸ್ಥಳಗಳಲ್ಲಿನ ಜಾನುವಾರು ಸಾಕಾಣಿಕೆದಾರರ ಅನುಕೂಲಕ್ಕೆಂದೇ ಸರ್ಕಾರ ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಪ್ರಾರಂಭಿಸಿ, ಇದಕ್ಕಾಗಿಯೇ ಜಿಲ್ಲೆಯಲ್ಲಿ ಒಟ್ಟು 09 ವಾಹನ ಗಳನ್ನು ಒದಗಿಸಿದ್ದು, ಪ್ರತಿ ವಾಹನವು ಒಬ್ಬರು ಪಶು ವೈದ್ಯರು, ಹಾಗೂ ಅಗತ್ಯ ಔಷಧಿಗಳನ್ನು ಹೊಂದಿದೆ.
ಜಿಲ್ಲೆಯಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ 02, ಹಿರಿಯೂರು-02, ಹೊಸದುರ್ಗ-02, ಚಿತ್ರದುರ್ಗ-01, ಹೊಳಲ್ಕೆರೆ-01 ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ 01 ಸಂಚಾರಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕ್ಷೇತ್ರಮಟ್ಟದಲ್ಲಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು.
ಸಂಚಾರಿ ಕುರಿಗಾಹಿಗಳು, ಗುಡ್ಡಗಾಡಿನಲ್ಲಿ, ಗಡಿಭಾಗದಲ್ಲಿರುವ ಜಾನುವಾರು ಸಾಕಾಣಿಕೆದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಹಾಯವಾಣಿಗೆ ಕರೆ ಮಾಡಿದಲ್ಲಿ ಕೂಡಲೆ ಸ್ಪಂದಿಸುವ ಕೆಲಸ ಆಗಬೇಕು, ಕರೆ ಮಾಡಿದರೂ ಬಂದು ಚಿಕಿತ್ಸೆ ಕೊಡುತ್ತಿಲ್ಲ ಎಂಬ ಯಾವುದೇ ದೂರುಗಳು ಬರಬಾರದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ರೈತರು ಮತ್ತು ಜಾನುವಾರುಗಳ ಮಾಲೀಕರು ರೋಗಗಳಿಂದ ಬಳಲುತ್ತಿರುವ ಪ್ರಾಣಿಗಳಿಗೆ ಚಿಕಿತ್ಸೆಗೆ ಅನುಕೂಲವಾಗುವಂತೆ ಸಹಾಯವಾಣಿ ಸಂಖ್ಯೆ 1962 ಗೆ ಕರೆ ಮಾಡುವ ಮೂಲಕ ಸಂಚಾರಿ ಪಶು ಚಿಕಿತ್ಸಾಲಯದ ಸೇವೆಯನ್ನು ಬಳಸಿಕೊಂಡು ಮನೆ ಬಾಗಿಲಿನಲ್ಲೇ ಚಿಕಿತ್ಸೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿವಾರು ಸಂಚಾರಿ ಪಶು ಚಿಕಿತ್ಸಾ ಘಟಕದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಸಂಚಾರಿ ಕುರಿಗಾಹಿಗಳು ಸಹ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 9 ಸಂಚಾರಿ ಪಶು ಚಿಕಿತ್ಸಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸಂಚಾರಿ ಪಶು ಚಿಕಿತ್ಸಾ ವಾಹನಗಳಲ್ಲಿ (ಅಂಬುಲೆನ್ಸ್) ಏಜೆನ್ಸಿಯವರಿಂದ ನೇಮಕಗೊಂಡ ಪಶುವೈದ್ಯಾಧಿಕಾರಿಗಳು, ಸಹಾಯಕರು ಹಾಗೂ ವಾಹನ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಂಚಾರಿ ಘಟಕಗಳು ಭಾನುವಾರದಂದೂ ಕೂಡ ಕಾರ್ಯ ನಿರ್ವಹಿಸುತ್ತವೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಕುಮಾರ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಸೇರಿದಂತೆ ಪಶುಪಾಲನಾ ಮತ್ತು ಪಶೈವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.