ಚಿತ್ರದುರ್ಗ: ಎಲ್ಲ ಮಹಿಳೆಯರಿಗೂ ಪ್ರಸ್ತುತ ಕಾನೂನುಗಳ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ಚಿತ್ರದುರ್ಗ ಜೆಎಂಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಶ್ಮಿ ಎಸ್.ಮರಡಿ ಹೇಳಿದರು.
ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಸೈಬರ್ ಅಪರಾಧಗಳ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮಹಿಳೆಯರಿಗೆ, ಚಿಕ್ಕಪುಟ್ಟ ಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಶೋಷಣೆ ಹಾಗೂ ಆರ್ಥಿಕ ಅಪರಾಧಗಳು ಸಹ ಹೆಚ್ಚಳವಾಗುತ್ತಿವೆ. ಈ ನಿಟ್ಟಿನಲ್ಲಿ ಸುತ್ತಮುತ್ತಲಿರುವ ಹಾಗೂ ಅವಶ್ಯಕತೆ ಇರುವ ಮಹಿಳೆಯರಿಗೆ ಪ್ರಸ್ತುತ ಕಾನೂನುಗಳ ಕುರಿತು ಅರಿವು ಮೂಡಿಸಬೇಕು. ಇದರಿಂದ ಬಹಳಷ್ಟು ಮಂದಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ, ಪ್ರತಿನಿತ್ಯವೂ ಯಾವ ಯಾವ ಮಹಿಳೆಗೆ ಎಲ್ಲೆಲ್ಲಿ ಅವಶ್ಯಕತೆ ಇದೆಯೋ, ಅಂತಹ ಮಹಿಳೆಯರಿಗೆ ಕಾನೂನಿನ ಅರಿವು- ನೆರವಿನ ಸಹಾಯಕ್ಕಾಗಿ ಅಲ್ಲಿ ನಾವುಗಳು ಉಪಸ್ಥಿತರಿದ್ದು, ಸಹಾಯ ಮಾಡಿದಾಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಬರಲಿದೆ ಎಂದರು.
ವಕೀಲೆ ಡಿ.ಕೆ.ಶೀಲಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿಯೂ ಸಹ ಮಹಿಳೆಯರಿಗೆ ತಾರತಮ್ಯ ಕಂಡುಬರುತ್ತಿದ್ದು, ಸಮಾನ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ. ಇದಕ್ಕೆ ನಮ್ಮ ಮನಸ್ಥಿತಿ ಪ್ರಮುಖ ಕಾರಣವಾಗಿದೆ. ಹಾಗಾಗಿ ನಮ್ಮ ಮನೆಯಿಂದ, ನಮ್ಮಿಂದಲೇ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಮುಂದಾದಾಗ ಮಾತ್ರ ಸಮಾನತೆ ಸಾಧ್ಯವಾಗಲಿದೆ ಎಂದು ಹೇಳಿದರು.
ಮಹಿಳೆಯರನ್ನು ಸಮಾನರಾಗಿ ಕಾಣಬೇಕು. ಮಹಿಳೆಯರು ಸಹ ಸಮಾನತೆ ಕೇಳಬೇಕೆ ಹೊರತು ಸ್ವೇಚ್ಛ ಪ್ರವೃತ್ತಿ ಕೇಳಬಾರದು. ಸ್ವೇಚ್ಛ ಪ್ರವೃತ್ತಿ ಯಾರಿಗೂ ಒಳ್ಳೆಯದಲ್ಲ ಎಂದು ತಿಳಿಸಿದ ಅವರು, ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಇದರ ಜೊತೆಗೆ ಮಹಿಳೆಯರು ತಮ್ಮ ಕುಟುಂಬಕ್ಕೆ ಅಷ್ಟೇ ಮಹತ್ವ ಕೊಡಬೇಕು. ಇದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಭಾಗವಹಿಸಿ, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಮಹಿಳೆಯರು ಇಂದು ಶಿಕ್ಷಣವಂತರಾಗುತ್ತಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ತುಲನೆ ಮಾಡಿದಾಗ ಹೆಣ್ಣು ಮಕ್ಕಳ ದೌರ್ಜನ್ಯವನ್ನು ನೋಡುತ್ತಿದ್ದೇವೆ. ಹಾಗಾಗಿ ಮಹಿಳೆಯರ ಸುರಕ್ಷತೆ ಕೊರತೆ ಎದ್ದು ಕಾಣಿಸುತ್ತಿದೆ. ನಾವೆಲ್ಲರೂ ಸೇರಿ ಸಕರಾತ್ಮಕವಾಗಿ ಮಹಿಳೆಯರಲ್ಲಿ ಬದಲಾವಣೆ ತರುತ್ತಾ ಸಮಾಜದಲ್ಲಿ ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗದಂತೆ ಜಾಗೃತಿ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ರಶ್ಮಿ ಅಕ್ಕನವರು “ಉದ್ಯೋಗಸ್ಥ ಮಹಿಳೆಯರಲ್ಲಿ ಒತ್ತಡ ನಿರ್ವಹಣೆ” ಕುರಿತು ಹಾಗೂ ಸೈಬರ್ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ವೆಂಕಟೇಶ್ ಅವರು “ಮಹಿಳೆಯರಿಗಾಗಿ ಸೈಬರ್ ಸುರಕ್ಷತೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರೇಣುಪ್ರಸಾದ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಅಭಿನವ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಅಧ್ಯಕ್ಷೆ ಕೊಲ್ಲಿಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಎಸ್.ವಿಜಯಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಿಗಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವೀಣಾ, ಸುಧಾ, ಅಭಿಲಾಷಾ ಸೇರಿದಂತೆ ಮತ್ತಿತರರು ಇದ್ದರು.