ಚಿತ್ರದುರ್ಗ : ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಇದೇ ಮಾರ್ಚ್ 16 ರಂದು ಭಾನುವಾರ ನಡೆಯಲಿದ್ದು, ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಹಟ್ಟಿ ತಿಪ್ಪೇಶನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.
ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಜಾತ್ರೆಗೆ ನಾಡಿನ ಹಲವು ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತಾಧಿಕಾರಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ. ಜಾತ್ರೆ ಪ್ರಯುಕ್ತ ನಾಯಕನಹಟ್ಟಿ ಪಟ್ಟಣ ನೂತನ ವಧುವಿನಂತೆ ಸಿಂಗಾರಗೊಂಡಿದೆ.
ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠ ಮತ್ತು ಹೊರಮಠದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿಟ್ಟಿನಲ್ಲಿ ಎರಡೂ ದೇವಾಲಯದ ಆವರಣ ಸ್ವಚ್ಛಗೊಳಿಸಲಾಗಿದೆ. ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡೂ ದೇವಾಲಯಗಳ ಆವರಣದಲ್ಲಿ ಬೃಹತ್ ಚಪ್ಪರದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಹೊರಮಠ ದೇವಾಲಯದ ಆವರಣದ ಸುತ್ತಲೂ ಶಾಶ್ವತವಾಗಿ ನೆರಳಿನ ವ್ಯವಸ್ಥೆಗಾಗಿ ಶೆಡ್ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಎಲ್ಲಾ ವಾರ್ಡ್ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬಿಸಿಲು ಹೆಚ್ಚಿರುವ ಕಾರಣ ಭಕ್ತಾಧಿಗಳಿಗೆ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕಂದಾಯ ಇಲಾಖೆಯಿಂದ ಸುಮಾರು 50 ಟ್ಯಾಂಕರ್ಗಳ ಮೂಲಕ ಹಾಗೂ 20 ಸಾವಿರ ಲೀಟರ್ ಸಾಮಥ್ರ್ಯದ 6 ಹಾಲಿನ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರಿಗೆ ವಿಶೇಷವಾದ ವ್ಯವಸ್ಥೆ ರೂಪಿಸಲಾಗಿದೆ.
ಮುಕ್ತಿಭಾವುಟ- ವರ್ಷದೊಳಗೆ ಹರಾಜಿನ ಮೊತ್ತ ಸಲ್ಲಿಸಲು ಅಡ್ವಾನ್ಸ್ ಚೆಕ್:
ದೇವಾಲಯದ ರೂಢಿ ಮತ್ತು ಸಂಪ್ರದಾಯ ಧಾರ್ಮಿಕ ಪದ್ಧತಿಯಂತೆ ಮುಕ್ತಿಬಾವುಟವನ್ನು ಹರಾಜು ಮಾಡುತ್ತಾ ಬಂದಿದ್ದು, ಹಿಂದೂ ಧಾರ್ಮಿಕ ದತ್ತಿ ಇಲಾಖಾ ಕಾಯ್ದೆಯ ಸೆಕ್ಷನ್-58ರಂತೆ ರೂಢಿ ಸಂಪ್ರದಾಯಗಳನ್ನು ಎಲ್ಲ ಅಧಿಕಾರಿಗಳು ಪಾಲಿಸಬೇಕಾಗಿದೆ, ಅದರಂತೆ ಮುಕ್ತಿಬಾವುಟ ಹರಾಜು ನಡೆಸಲು ತೀರ್ಮಾನಿಸಲಾಗಿದೆ.
ಮುಕ್ತಿಬಾವುಟ ಹರಾಜು ನಡೆಸುವ ಮುಂಚೆ ನೂರು ರೂಪಾಯಿ ಮುಖ ಬೆಲೆಯ ಛಾಪ ಕಾಗದ ತಯಾರಿಸಿಕೊಂಡು ಆಖೈರು ಹರಾಜುದಾರರನ್ನು 1ನೇ ಪಾರ್ಟಿಯಾಗಿ ಸಹಿ ಪಡೆಯಲು ಹಾಗೂ ವರ್ಷದೊಳಗೆ ಹರಾಜಿನ ಮೊತ್ತವನ್ನು ಸಲ್ಲಿಸಲು ಒಂದು ಅಡ್ವಾನ್ಸ್ ದಿನಾಂಕದ ಚೆಕ್ನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಅದರಂತೆಯೇ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಸಲಾಗುವುದು, ಈ ನಿಟ್ಟಿನಲ್ಲಿ ಹರಾಜು ಕೂಗುವವರು ಸಹಕರಿಸಬೇಕು. ಮುಕ್ತಿಬಾವುಟ ಹರಾಜಿನ ಬಾಬ್ತು ಬಾಕಿ ಇರಿಸಿಕೊಂಡಿರುವವರೆಗಿ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.