ಬೆಂಗಳೂರು : ಮಹಿಳಾ ಮೀಸಲಾತಿ ಜಾರಿಯಾದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಅಭ್ಯರ್ಥಿಗಳಾಗುತ್ತಾರೆ. ಹೀಗಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಭಾರತ ಜೋಡೋ ಭವನದಲ್ಲಿ ಇಂದು ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೆಹರೂ ಅವರು ಒಂದು ಮಾತು ಹೇಳಿದ್ದಾರೆ. ಜನರನ್ನು ಜಾಗೃತರನ್ನಾಗಿ ಮಾಡಬೇಕಾದರೆ ಮಹಿಳೆಯರು ಜಾಗೃತರಾಗಿರಬೇಕು. ಆಕೆ ನಡೆದರೆ ಕುಟುಂಬ ನಡೆದಂತೆ, ಕುಟುಂಬ ನಡೆದರೆ ಗ್ರಾಮ ನಡೆದಂತೆ, ಸಮಾಜ ಹಾಗೂ ದೇಶ ನಡೆಯುತ್ತದೆ. ರಾಜ್ಯದಲ್ಲಿ 1.23 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. 1.50 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ನೀಡಲಾಗುತ್ತಿದೆ ಎಂದರು.
ರಾಜ್ಯದ ಎಲ್ಲಾ ಮಹಿಳೆಯರಿಗೂ ಬಸ್‌ನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದೇವೆ. ಇನ್ನು ಬಡವರಿಗೆ ನೀಡುವ ಮನೆ ಹಾಗೂ ನಿವೇಶನಗಳನ್ನು ಆ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಮಾಡಬೇಕು ಎಂದು ಕಡ್ಡಾಯ ನಿಯಮ ಮಾಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಆಶ್ರಯ 7 ಸಾವಿರ ನಿವೇಶನ ನೀಡಿದ್ದೆ. ಎಲ್ಲವನ್ನು ಮಹಿಳೆಯರ ಹೆಸರಿಗೆ ನಿವೇಶನ ಹಂಚಿದೆ. ಆದಾದ ನಂತರದ ಚುನಾವಣೆಯಲ್ಲಿ ಜನ ನನ್ನನ್ನು 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದರು ಎಂದು ಹೇಳಿದರು.
18 ಕ್ಷೇತ್ರಗಳ ಉಪಚುನಾವಣೆಯಲ್ಲಿ 15ರಲ್ಲಿ ಸೋತು ಪಕ್ಷ ಕಷ್ಟದ ಪರಿಸ್ಥಿತಿಯಲ್ಲಿತ್ತು. ಮಾರ್ಚ್ 11ರಂದು ನಾನು ಅಧ್ಯಕ್ಷನಾಗಿ ನೇಮಕಗೊಂಡು 5 ವರ್ಷವಾಗಿದೆ. ನಾನು ಇಲ್ಲಿ ಅಧಿಕಾರ ಸ್ವೀಕರಿಸಿದ ದಿನ ‘ನನಗೆ ಭವಿಷ್ಯ ಕಾಣಬೇಕಾದರೆ ಮಹಿಳೆ ಹಾಗೂ ಯುವಕರಿಂದ ಮಾತ್ರ ಸಾಧ್ಯ’ ಎಂದು ಹೇಳಿದ್ದೆ. ಅದರಂತೆ ನಾವು ಚುನಾವಣೆ ಪ್ರಣಾಳಿಕೆ ಮಾಡುವಾಗ ಯುವಕರು ಹಾಗೂ ಮಹಿಳೆಯರಿಗೆ ಆದ್ಯತೆ ನೀಡಿದೆವು. ನಮ್ಮ ಈ ಯೋಜನೆಗಳು ಜಾರಿ ಸಾಧ್ಯವೇ? ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಹಾಗೂ ದೇಶ ದಿವಾಳಿಯಾಗಲಿದೆ ಎಂದು ಪ್ರಧಾನಮಂತ್ರಿಯಾದಿಯಾಗಿ ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಆದರೆ ಈಗ ನಮ್ಮ ಮಾದರಿ ಅನುಸರಿಸಿ ಬಿಜೆಪಿ ರಾಜ್ಯಗಳು ಗ್ಯಾರಂಟಿ ಯೋಜನೆ ನೀಡುತ್ತಿವೆ. ನಾವು ಕಾರ್ಯಕರ್ತರಿಗಾಗಿ ಗ್ಯಾರಂಟಿ ಸಮಿತಿ ರಚಿಸಿದ್ದೇವೆ. ಇದರ ವಿರುದ್ಧ ಅಧಿವೇಶನದಲ್ಲಿ ವಿರೋಧ ಪಕ್ಷದವರು ನಮ್ಮ ಮೇಲೆ ವಾಗ್ದಾಳಿಗೆ ಮುಂದಾಗಿದ್ದಾರೆ. ಶಾಸಕರ ಹಕ್ಕು ಕಸಿಯುತ್ತಿದ್ದೀರಿ. ಕಾರ್ಯಕರ್ತರು ಅಧಿಕಾರಕ್ಕೆ ತಂದಿದ್ದಾರೆ. ಅದಕ್ಕಾಗಿ ಮಾಡಿದ್ದೇವೆ. ಅಧಿಕಾರಕ್ಕೆ ತರದಿದ್ದರೆ ನಾವು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಯಾರ ಹಕ್ಕನ್ನು ಕಸಿಯುತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ ಎಂದರು.
ಫಲಾನುಭವಿಗಳಿಗೆ ಈ ಯೋಜನೆಗಳು ಸರಿಯಾಗಿ ತಲುಪುತ್ತಿವೆಯೇ ಇಲ್ಲವೇ ಎಂದು ಪರಿಶೀಲನೆಗೆ ಈ ಸಮಿತಿ ಮಾಡಿದ್ದೇವೆ. ತಾಲುಕು ಮಟ್ಟದಲ್ಲಿ ಕಚೇರಿ ನೀಡಿ ಅವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಇದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ನಾನು ಇತ್ತೀಚೆಗೆ ಉಡುಪಿಗೆ ಹೋಗಿದ್ದಾಗ ಅಲ್ಲಿನ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳಿಗೆ ವಿರೋಧ ಮಾಡುತ್ತಿದ್ದರಂತೆ. ಅದಕ್ಕೆ ನಾನು ಅವರಿಗೆ ಒಂದು ಸವಾಲಾಕಿದೆ. ನಿಮ್ಮ ಪಕ್ಷದ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ತ್ಯಜಿಸಿರಿ ಎಂದು ಕರೆ ಕೊಡುವಂತೆ ಹೇಳಿದೆ. ಇದನ್ನು ಮಾಡಲು ಅವರಿಂದ ಸಾಧ್ಯವೇ? ಅವರ ಬೆಂಬಲಿಗರೇ ಅವರಿಗೆ ಛೀಮಾರಿ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.