ಬೆಂಗಳೂರು : ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣದ ಕುರಿತು ಸೋಮವಾರ ಸದನದಲ್ಲಿ ಮಾತನಾಡುವೆ. ಆಕೆಯೊಂದಿಗೆ ಸಂಪರ್ಕವಿರುವ ಇಬ್ಬರು ಸಚಿವರ ಹೆಸರನ್ನು ಸದನದಲ್ಲಿ ಹೇಳುವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ರನ್ಯಾ ರಾವ್ ವಿದೇಶಗಳಿಂದ ಚಿನ್ನ ಅಕ್ರಮ ಸಾಗಾಟ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಈಗ ಆ ಬಗ್ಗೆ ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಇದು ಸದನದ ರಹಸ್ಯ ಎಂದರು. ಆಕೆಗೆ ಪ್ರೊಟೋಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಚಿನ್ನ ಎಲ್ಲಿಂದ ತಂದಿದ್ದಾರೆ? ಎಲ್ಲಿಟ್ಟು ತಂದಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿದರು.
ರನ್ಯಾ ಪ್ರಕರಣದಲ್ಲಿ ಕೇಂದ್ರದ ಕಸ್ಟಮ್ಸ್ ಆಧಿಕಾರಿಗಳೂ ತಪ್ಪು ಮಾಡಿದ್ದಾರೆಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಯಾರು ತಪ್ಪು ಮಾಡಿದ್ದರೂ ಅದು ತಪ್ಪೇ. ಕಸ್ಟಮ್ಸ್ ಆಧಿಕಾರಿಗಳು ತಪ್ಪು ಮಾಡಿದ್ದರೆ ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೆ ಅದು ಕೂಡ ತಪ್ಪೇ ಎಂದು ತಿಳಿಸಿದರು.
ರನ್ಯಾಗೆ ಕೆಐಎಡಿಬಿಯಿಂದ 12 ಎಕರೆ ಜಮೀನು ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜಮೀನು ಕೊಟ್ಟಿದ್ದನ್ನು ಸ್ವತಃ ಮುರುಗೇಶ್ ನಿರಾಣಿ ಒಪ್ಪಿಕೊಂಡಿದ್ದಾರೆ. 12 ಏಕರೆ ಜಮೀನು ಕೊಟ್ಟಿದ್ದು, ಹಣ ಪಾವತಿ ಮಾಡದ ಕಾರಣ ಅದು ರದ್ದಾಗಿದೆ. 12 ಏಕರೆಗೆ ಜಮೀನಿಗೆ ಯಾರೋ ಒಬ್ಬರು ಹಣ ಕೊಡುತ್ತೇನೆ ಎಂದಿದ್ದರು. ಅವರು ಕೊಟ್ಟಿಲ್ಲ. ಹಾಗಾಗಿ ಜಮೀನು ಹಂಚಿಕೆ ಹಾಗಾಗಿ ರದ್ದಾಗಿದೆ ಎಂದರು.