ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆಯಲ್ಲಿ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.
ಇದೇ ಪ್ರಕರಣದಲ್ಲಿ ಉದ್ಯಮಿ ಪುತ್ರ ತರುಣ್ ರಾಜು ಅವರ ಹೆಸರೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಡಿಆರ್‌ಐ ಅಧಿಕಾರಿಗಳು ತರುಣ್ ರಾಜು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತರುಣ್ ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗಗೊಂಡಿವೆ. ನಟಿ ರನ್ಯಾ ರಾವ್ ಮತ್ತು ತರುಣ್ ಚಿನ್ನ ಆಮದು ಮತ್ತು ರಫ್ತಿಗಾಗಿ 2023ರಲ್ಲಿ ವೈರಾ ಡೈಮಂಡ್ಸ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ಕಂಪನಿ ತೆರೆದಿದ್ದರು.
ಈ ಕಂಪನಿ ಮೂಲಕ ಅಕ್ರಮವಾಗಿ ಗಳಿಸಿದ ಹಣವನ್ನು ಸಕ್ರಮಗೊಳಿಸಿಕೊಳ್ಳುತ್ತಿದ್ದರು. ಚಿನ್ನ ಖರೀದಿ ಮಾಡಿ ವಿದೇಶಿ ಕರೆನ್ಸಿಯಲ್ಲಿ ಹಣ ಪಾವತಿಸಲಾಗುತ್ತಿತ್ತು. ಈ ಮಾಹಿತಿ ಪಡೆದು ಇಡಿ, ವೈರಾ ಡೈಮಂಡ್ಸ್ ಟ್ರೇಡಿಂಗ್ ಕಂಪನಿ ವಹಿವಾಟು ಪರಿಶೀಲನೆ ನಡೆಸುತ್ತಿದೆ. ತರುಣ್ ರಾಜು ವ್ಯವಹಾರದ ಮೇಲೂ ಇಡಿ ಅಧಿಕಾರಿಗಳ ಕಣ್ಣು ಇಟ್ಟಿದ್ದಾರೆ. ತರುಣ್ ರಾಜು ಬ್ಯಾಂಕ್ ಮಾಹಿತಿಯನ್ನು ಇಡಿ ಅಧಿಕಾರಿಗಳು ಜಾಲಾಡುತ್ತಿದ್ದಾರೆ.
ಡಿಆರ್‌ಐ ತನಿಖೆ ವೇಳೆ ಹವಾಲದ ಮೂಲಕ ವ್ಯವಹಾರ ಎಂದು ತಿಳಿದಿತ್ತು. ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಡಿ ಕೂಡ ನಟಿ ರನ್ಯಾ ರಾವ್ ಮತ್ತು ತರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ರನ್ಯಾಗೆ ಸಿಬಿಐ ಸಂಕಷ್ಟ: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಟಿ ರನ್ಯಾ ರಾವ್ ಅವರನ್ನು ಸಿಬಿಐ ತನ್ನ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ಸಿಬಿಐ ಈಗಾಗಲೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಇಬ್ಬರು ಪೊಲೀಸ್ ಕಾನ್ಸಟೇಬಲ್ ಹೇಳಿಕೆ ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಮಹಜರನ್ನೂ ನಡೆಸಿದೆ. ಮುಂದಿನ ಭಾಗವಾಗಿ ನಟಿ ರನ್ಯಾ ರಾವ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಅನುಮತಿ ಪಡೆದು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ನಟಿ ರನ್ಯಾ ರಾವ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.