ನವದೆಹಲಿ : 2011ರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನ ಚಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರ ಛೋಟಾ ರಾಜನ್ ನನ್ನು ಸೋಮವಾರ ಮುಂಬೈನ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್ ನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರುಪಡಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಅಡಿಯಲ್ಲಿ ಗೊತ್ತುಪಡಿಸಲಾದ ವಿಶೇಷ ನ್ಯಾಯಾಧೀಶ ಎ.ಎಂ. ಪಾಟೀಲ್ ಅವರು, ಛೋಟಾ ರಾಜನ್ ಅವರನ್ನು ಖುಲಾಸೆಗೊಳಿಸಿದ್ದಾರೆ.
ಯಾವುದೇ ಅಪರಾಧ ಅಥವಾ ಪ್ರಕರಣದಲ್ಲಿ ಅವರ ಅಗತ್ಯವಿಲ್ಲದಿದ್ದರೆ ಛೋಟಾ ರಾಜನ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.
2011ರ ಮೇ 17 ರಂದು ದಕ್ಷಿಣ ಮುಂಬೈನಲ್ಲಿ ಇಬ್ಬರು ವ್ಯಕ್ತಿಗಳು ಆರಿಫ್ ಅಬುನಾಕರ್ ಸಯ್ಯದ್ ಎಂಬುವವರ ಮೇಲೆ ಗುಂಡು ಹಾರಿಸಿದರು. ಸಯ್ಯದ್ ಪರಾರಿಯಾಗಿರುವ ದರೋಡೆಕೋರ ದಾವೂದ್ ಇಬ್ರಾಹಿಂನ ಕಿರಿಯ ಸಹೋದರ ಇಕ್ಬಾಲ್ ಹಸನ್ ಶೇಖ್ ಇಬ್ರಾಹಿಂ ಶೇಖ್ ಕಸ್ಕರ್ ಅವರ ಚಾಲಕ ಮತ್ತು ಅಂಗರಕ್ಷಕರಾಗಿದ್ದರು.
ಇನ್ನು ಭಾರತೀಯ ದಂಡ ಸಂಹಿತೆ, ಒಅಔಅಂ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಕೊಲೆ ಮತ್ತು ಕ್ರಿಮಿನಲ್ ಪಿತೂರಿಗಾಗಿ ಛೋಟಾ ರಾಜನ್ ಅವರ ಸೂಚನೆಯ ಮೇರೆಗೆ ಈ ಕೊಲೆ ನಡೆದಿದೆ. ಪತ್ರಕರ್ತ ಜ್ಯೋತಿರ್ಮಯ್ ಡೇ ಅವರ ಹತ್ಯೆಗೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವುದರಿಂದ ರಾಜನ್ ಜೈಲಿನಲ್ಲಿಯೇ ಇದ್ದಾರೆ. ಛೋಟಾ ರಾಜನ್ ಇತರ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.