ಹೈದರಾಬಾದ್: ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಈಗ ಸರ್ಕಾರದ ಬಳಿ ಸಂಬಳ ಕೊಡುವುದಕ್ಕೂ ಹಣ ಇಲ್ಲ. ಹೀಗಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಆರ್‌ಬಿಐಯಿಂದ 4,000 ಕೋಟಿ ರೂ. ಕೈ ಸಾಲ ಪಡೆದಿದ್ದೇವೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಸಾಲದ ಹೊರೆ ಮತ್ತು ಇತರ ಕಾರಣಗಳಿಂದ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. ಹಣ ಇಲ್ಲದ ಕಾರಣ ರಾಜ್ಯ ನೌಕರರಿಗೆ ಪ್ರತೀ ತಿಂಗಳ ಆರಂಭದಲ್ಲಿ ವೇತನ ನೀಡಲು ಕಷ್ಟವಾಗುತ್ತಿದೆ. ನೌಕರರ ತುಟ್ಟಿ ಭತ್ಯೆ (ಡಿಎ) ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಪ್ರಸ್ತುತ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿ ಒತ್ತಾಯಿಸಬೇಡಿ. ಮುಂದೆ ಸರ್ಕಾರದ ಹಣಕಾಸು ಪರಿಸ್ಥಿತಿಯ ಸಂಪೂರ್ಣ ವಿವರವನ್ನು ನೀಡುತ್ತೇನೆ ಎಂದಿದ್ದಾರೆ.
ಸರ್ಕಾರಿ ನೌಕರರು ಮುಂದಿನ ದಿನಗಳಲ್ಲಿ ತಮ್ಮ ಕೆಲಸಗಳನ್ನು ಸೇವೆಯಂತೆ ಮಾಡಬೇಕು. ನೌಕರರು ದಯವಿಟ್ಟು ಸರ್ಕಾರದ ಜೊತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.