ಹರಿಯಾಣ : ದೇಶದ ಅತ್ಯಂತ ಶ್ರೀಮಂತ ಐಎಎಸ್ ಅಧಿಕಾರಿ, ಕೇವಲ 1 ರೂ ವೇತನ ತೆಗೆದುಕೊಂಡ ಹರಿಯಾಣದ ಗುರುಗ್ರಾಮ್ ನಿವಾಸಿ ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಅವರ ಯಶಸ್ಸಿನ ಕಥೆ ಇಲ್ಲಿದೆ
ವೃತ್ತಿ ಜೀವನ ಆರಂಭಿಸಿದಾಗ, ಅಮಿತ್ ಕಟಾರಿಯಾ ಅವರು ಕೇವಲ 1 ರೂಪಾಯಿ ಮಾತ್ರ ಸಂಬಳವಾಗಿ ಪಡೆದಿದ್ದರಂತೆ. ಇದು ಆರ್ಥಿಕ ಲಾಭಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಸೇವೆಯತ್ತ ಅವರ ಗಮನವನ್ನು ಪ್ರತಿಬಿಂಬಿಸುತ್ತದೆ. ಕೇಂದ್ರದ ನಿಯೋಜನೆಯಲ್ಲಿ 7 ವರ್ಷಗಳ ಅಧಿಕಾರಾವಧಿಯ ನಂತರ ಅವರು ಇತ್ತೀಚೆಗೆ ರಾಜ್ಯಕ್ಕೆ ಮರಳಿದ್ದಾರೆ.ಪ್ರಸ್ತುತ, ಅವರು ಛತ್ತೀಸ್‌ಘಡ್‌ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ದೇಶದ ಅತ್ಯಂತ ಶ್ರೀಮಂತ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.
ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಅವರು 2015 ರಲ್ಲಿ ಛತ್ತೀಸ್‌ಘಡ್‌ದ ಬಸ್ತಾರ್‌ನ ಕಲೆಕ್ಟರ್ ಆಗಿದ್ದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ಸನ್‌ಗ್ಲಾಸ್ ಧರಿಸಿದ್ದಕ್ಕಾಗಿ ಅವರು ಸುದ್ದಿಯಾಗಿದ್ದರು.ಈ ಘಟನೆಯು ಸರ್ಕಾರಿ ಶಿಷ್ಟಾಚಾರದ ಉಲ್ಲಂಘನೆಯಾಗಿ ಕಂಡು ಬಂದಿತ್ತು ಮತ್ತು ಕಟಾರಿಯಾ ಅವರಿಗೆ ರಾಜ್ಯ ಸರ್ಕಾರದಿಂದ ಶೋಕಾಸ್ ನೋಟಿಸ್ ಸಹ ಬಂದಿತ್ತಂತೆ.
ಆಗ ರಮಣ್ ಸಿಂಗ್ ಛತ್ತೀಸ್‌ಘಡ್‌ದ ಮುಖ್ಯಮಂತ್ರಿಯಾಗಿದ್ದರು. ಈ ವಿವಾದದ ಹೊರತಾಗಿಯೂ ಸಹ ಆಡಳಿತಕ್ಕೆ, ವಿಶೇಷವಾಗಿ ಪಾರದರ್ಶಕತೆ ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ಶ್ರಮಿಸಿರುವಲ್ಲಿ ಕಟಾರಿಯಾ ಅವರ ಕೊಡುಗೆಗಳನ್ನು ವ್ಯಾಪಕವಾಗಿ ಗುರುತಿಸಲಾಯಿತು.
ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಅವರನ್ನು ಭಾರತದ ಶ್ರೀಮಂತ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರು ಆರ್‌ಕೆ ಪುರಂನ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ನಂತರ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿಯಲ್ಲಿ ತಮ್ಮ ಪದವಿಪೂರ್ವ ಅಧ್ಯಯನವನ್ನು ಮುಂದುವರೆಸಿದರು, ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಸಹ ಪಡೆದರು.
2003 ರಲ್ಲಿ, ಅಮಿತ್ ಕಟಾರಿಯಾ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 18ನೇ ರ್ಯಾಂಕ್ ಗಳಿಸುವುದರೊಂದಿಗೆ ಭಾರತೀಯ ಆಡಳಿತ ಸೇವೆಗೆ ಸೇರಿದರು.
ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಅವರು ರಿಯಲ್ ಎಸ್ಟೇಟ್‌ನಲ್ಲಿ ಆಸಕ್ತಿ ಹೊಂದಿರುವ ಪ್ರಮುಖ ವ್ಯಾಪಾರ ಕುಟುಂಬದಿಂದ ಬಂದವರು, ವಿಶೇಷವಾಗಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇವರ ಕುಟುಂಬ ವ್ಯವಹಾರವು ಗಣನೀಯ ಲಾಭವನ್ನು ಗಳಿಸುತ್ತಿದೆ ಎಂದು ಹೇಳಲಾಗುತ್ತದೆ.
ನಾಗರಿಕ ಸೇವೆಗಳಿಗೆ ಸೇರುವ ತಮ್ಮ ಜೀವನದ ಗುರಿಯು ದೇಶಕ್ಕೆ ಸೇವೆ ಸಲ್ಲಿಸುವುದಾಗಿತ್ತು ಎಂದು ಅವರು ಅನೇಕ ಬಾರಿ ಹೇಳಿ ಕೊಂಡಿದ್ದಾರೆ.ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಅವರು ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿರುವ ಅಸ್ಮಿತಾ ಹಂಡಾ ಅವರನ್ನು ವಿವಾಹವಾಗಿದ್ದಾರೆ.