ಬೆಂಗಳೂರು : ಅಕ್ರಮವಾಗಿ ಸರ್ಕಾರಿ ಭೂಮಿ, ಗೋಮಾಳ ಜಮೀನು ಒತ್ತುವರಿ ಮಾಡಿಕೊಂಡಿರುವವರಿಗೆ ನಮ್ಮ ಅಧಿಕಾರಿಗಳೇ ಸಹಾಯ ಮಾಡ್ತಿದ್ದಾರೆ ಎಂದು ಕಂದಾಯ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ನ ಶರವಣ ಅವರು ಬೆಂಗಳೂರು ನಗರದಲ್ಲಿ 3 ವರ್ಷಗಳಿಂದ ನೂರಾರು ಎಕರೆ ಸರ್ಕಾರಿ ಭೂಮಿ, ಗೋಮಾಳ ಒತ್ತುವರಿ ಆಗಿದೆ. ಈವರೆಗೂ ಸರ್ಕಾರ ಎಷ್ಟು ಎಕರೆ ಜಾಗ ಒತ್ತುವರಿ ತೆರವು ಮಾಡಿದೆ. ಗೋಮಾಳ ಜಾಗ ಒತ್ತುವರಿ ಆಗಿದೆ. ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ.
ಒತ್ತುವರಿ ತೆರವು ಮಾಡಲು ಅಧಿಕಾರಿಗಳ ಒತ್ತಡ ಇದೆಯಾ? ಅಧಿಕಾರಿಗಳು ಅಕ್ರಮ ಮಾಡ್ತಿದ್ದಾರಾ? ಸಚಿವರ ಕ್ಷೇತ್ರದಲ್ಲಿ ಇಂತಹ ಕೇಸ್ ಇದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಒತ್ತುವರಿ ತೆರವು ಮಾಡಬೇಕು ಅಂತ ಆಗ್ರಹ ಮಾಡಿದರು.
ಇದಕ್ಕೆ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿ, ಕೆಲವು ಅಧಿಕಾರಿಗಳಿಂದಲೇ ಒತ್ತುವರಿ ತೆರವು ಆಗ್ತಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ವ್ಯವಸ್ಥಿತವಾಗಿ ಇಂತಹ ಪ್ರಕರಣಗಳನ್ನ ನಡೆಸುತ್ತಿದ್ದಾರೆ. ಕಾನೂನು ಅಡಿಯಲ್ಲೇ ಕಾನೂನು ವಿರೋಧಿ ಕೆಲಸ ಕೆಲ ಅಧಿಕಾರಿಗಳು ಮಾಡ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಇಂತಹ ಅಕ್ರಮ ನಡೆದಿದೆ. ಗೋಮಾಳ ಒತ್ತುವರಿ ಮಾಡಿಕೊಂಡಿದ್ದಾರೆ. ಪಂಚಾಯತಿಯವರೇ ಖಾತೆ ಮಾಡಿಕೊಟ್ಡಿದ್ದಾರೆ. ವ್ಯವಸ್ಥಿತವಾಗಿ ಅಕ್ರಮವಾಗಿ ಅಧಿಕಾರಿಗಳ ಬೆಂಬಲದಿಂದ ಒತ್ತುವರಿ ಮಾಡಿಕೊಂಡಿದ್ದಾರೆ. ಇಂತಹ ಕೇಸ್ ಬಗ್ಗೆ ನಾವು ಟ್ರ್ಯಾಕ್ ಮಾಡ್ತಿದ್ದೇವೆ ಎಂದು ತಿಳಿಸಿದರು.