ಮುಂಬಯಿ: ಆರ್ಎಸ್ಎಸ್ ಕೇಂದ್ರ ಕಚೇರಿಯಿರುವ ನಾಗಪುರ ನಗರದ ಮಹಲ್ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದಿರುವ ಕೋಮು ಹಿಂಸಾಚಾರದ ರೂವಾರಿಯ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಫಾಹಿಮ್ ಶಮೀಮ್ ಖಾನ್ ಎಂಬಾತನ ಪ್ರಚೋದನಕಾರಿ ಭಾಷಣದಿಂದ ಹಿಂಸಾಚಾರ ಸಂಭವಿಸಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಫಾಹಿಮ್ ಖಾನ್ ನಾಗಪುರದ ಯಶೋಧರ ನಗರದ ಸಂಜಯ್ ಭಾಗ್ ಕಾಲನಿಯ ನಿವಾಸಿಯಾಗಿದ್ದು, ಗಲಭೆಯ ಬಳಿಕ ತಲೆಮರೆಸಿಕೊಂಡಿದ್ದಾನೆ.
ನಾಗಪುರ ನಗರದಲ್ಲಿ ರಾಜಕೀಯ ಮುಖಂಡನಾಗಿ ಗುರುತಿಸಿಕೊಂಡಿದ್ದ 38ರ ಹರೆಯದ ಫಾಹಿಮ್ ಖಾನ್ 2024ರ ಲೋಕಸಭೆ ಚುನಾವಣೆಯಲ್ಲಿ ನಿತಿನ್ ಗಡ್ಕರಿಯವರ ಎದುರು ಮೈನಾರಿಟಿಸ್ ಡೆಮಾಕ್ರಟಿಕ್ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ 6.5 ಲಕ್ಷ ಮತಗಳ ಅಂತರದಿಂದ ಸೋತಿದ್ದ. ನಾಗಪುರದಲ್ಲಿ ಹಿಂದು ಸಂಘಟನೆಗಳು ಔರಂಗಜೇಬನ ಗೋರಿ ನಾಶ ಮಾಡಲು ಆಗ್ರಹಿಸಿ ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಬೆನ್ನಿಗೆ ಫಾಹಿಮ್ ಖಾನ್ ತನ್ನ ಸಮುದಾಯದವರನ್ನುದ್ದೇಶಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದಾನೆಂದು ಪೊಲೀಸರು ಆರೋಪಿಸಿದ್ದಾರೆ.ಸೋಮವಾರ ರಾತ್ರಿ ನಾಗಪುರ ನಗರದಲ್ಲಿ ಎರಡು ಹಂತದಲ್ಲಿ ನಡೆದ ಹಿಂಸಾಚಾರದಲ್ಲಿ ಅನೇಕ ವಾಹನಗಳನ್ನು ಸುಟ್ಟು ಹಾಕಲಾಗಿದೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ದಾಧಲೆ ಎಸಗಲಾಗಿದೆ. ಕಲ್ಲು ತೂರಾಟದಲ್ಲಿ ಪೊಲೀಸರ ಸಹಿತ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.