ಬೆಂಗಳೂರಿನಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಶುರುವಾಗಿದೆ. ಉಳಿದ ಭಾಗದಲ್ಲಿ ಉಷ್ಣ ಅಲೆ ಕಂಡು ಬರುತ್ತಿದೆ. ಸದ್ಯದ ಮುನ್ಸೂಚನೆ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ ಇದೇ ಮಾರ್ಚ್ 23 ರಂದು ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗುವ ನಿರೀಕ್ಷೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ತಾಪಮಾನದ ತೀವ್ರತೆ ಹೆಚ್ಚಾಗಿದೆ. ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಈ ಮಧ್ಯೆ ಒಂದು ದಿನ ಮಾತ್ರ ಸಾಧಾರಣದಿಂದ ಉತ್ತಮ ಮಳೆ ಬರುವ ಮುನ್ಸೂಚನೆ ಇದೆ. ಮುಂಬರುವ ಭಾನುವಾರದಂದು (ಮಾರ್ಚ್ 23) ಪೂರ್ವ ಮುಂಗಾರು ನಗರದಲ್ಲಿ ಚುರುಕಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಸಂಡೇ ಮೋಜು ಮಸ್ತಿಗೆ ಬ್ರೇಕ್ ಸಾಧ್ಯತೆ ಈ ಮೂಲಕ ವಾರಾಂತ್ಯದ ಮೋಜು, ಮಸ್ತಿಗೆ ಈ ಬಾರಿ ಬ್ರೇಕ್ ಸಿಗುವ ಸಾಧ್ಯತೆ ಇದೆ. ಅಂದು ಬೆಂಗಳೂರಿನಾದ್ಯಂತ ತಂಪು ವಾತಾವರಣ, ಮಬ್ಬು ವಾತಾವರಣ ಇರಲಿದೆ. ತಾಪಮಾನದಲ್ಲಿ ತೀವ್ರ ರೂಪದ ದಿಢೀರ್ ಬದಲಾವಣೆಗಳು ಕಂಡು ಬರಲಿವೆ. ದಾಖಲಾಗುತ್ತಿರುವ 22-23 ಕನಿಷ್ಠ ಉಷ್ಣಾಂಶವು ಅಂದು ಇಳಿಕೆ ಆಗಿರಲಿದೆ. ಆ ಒಂದು ದಿನ ಹೊರತುಪಡಿಸಿದರೆ, ಉಳಿದ ಎಲ್ಲ ದಿನಗಳು ಮತ್ತೆ ಬಿಸಿಲಿನ, ತೀವ್ರ ತಾಪದ ದಿನಗಳಾಗಿರಲಿವೆ. ಈಗಾಗಲೇ ಪೂರ್ವ ಮುಂಗಾರು ಕಳೆದೊಂದು ವಾರದಿಂದ ಮೈಸೂರು, ಮಡಿಕೇರಿ, ಚಾಮರಾಜನಗರ, ದಕ್ಷಿಣಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಆಗಾಗ ಸುರಿಯುತ್ತಿದೆ. ಇದೆಲ್ಲ ನೋಡಿದರೆ, ಕೆಲವೆಡೆ ಪೂರ್ವ ಮುಂಗಾರು ಮಳೆ ಚುರುಕಾಗಿದ್ದು, ಇದೇ ಸ್ಥಿತಿ ಮುಂದುವರಿಯಲಿದೆ.
ಉಳಿದಂತೆ ದಕ್ಷಿಣ ಒಳನಾಡು, ಮುಖ್ಯವಾಗಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬುಧವಾರದವರೆಗೆ ಒಣಹವೆ ಕಂಡು ಬಂದಿದೆ. ಬುಧವಾರ ಸಂಜೆ ಉತ್ತರ ಕರ್ನಾಟಕದಲ್ಲಿ ಕೊಂಚ ತಂಪು ವಾತಾವರಣ ಸೃಷ್ಟಿಯಾಗಿದೆ. ಹವಾಮಾನ ವೈಪರಿತ್ಯದಿಂದ ಉಂಟಾಗುವ ಬದಲಾವಣೆಗಳಿಂದ ಬೆಂಗಳೂರಿನಲ್ಲಿ ಮಳೆ ನಿರೀಕ್ಷೆ, ಒಣ ಹವೆ ಪ್ರದೇಶದಲ್ಲಿ ತಂಪು ಗಾಳಿಯು ಕಂಡು ಬರುತ್ತಿದೆ.
ಬೆಂಗಳೂರು ತಾಪಮಾನ ದಾಖಲಾತಿ ವಿವರ ನಗರದಲ್ಲಿ ಬುಧವಾರ ಸಂಜೆ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ 35.5 ಡಿ.ಸೆ.ಗರಿಷ್ಠ ಉಷ್ಣಾಂಶ, ಬೆಂಗಳೂರು ಏರ್ಪೋರ್ಟ್ ವ್ಯಾಪ್ತಿಯಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 34.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ನಗರದಲ್ಲಿ ನಿತ್ಯ 35 ಡಿಗ್ರಿ ಸೆಲ್ಸಿಯಸ್ ಆಸು ಪಾಸಿನಲ್ಲಿ ತಾಪಮಾನ ದಾಖಲಾಗುತ್ತಿದ್ದು, ಒಣ ಹವೆ ಕಂಡು ಬರುತ್ತಿದೆ. ಜನ ಬಿಸಿಲಿಗೆ ತತ್ತರಿಸುತ್ತಿದ್ದಾರೆ.