ರಾಜಸ್ಥಾನ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅನೇಕರ ಕನಸು, ಆದರೆ ಕೆಲವರು ಮಾತ್ರ ನನಸಾಗಿಸಿಕೊಳ್ಳುತ್ತಾರೆ. ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ಪರೀಕ್ಷೆಯನ್ನು ಮೂರನೇ ಪ್ರಯತ್ನದಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ಪರಿ ಬಿಷ್ಣೋಯ್ ಅವರ ಯಶೋಗಾಥೆ ಇದು.
ಪರಿ ಬಿಷ್ಣೋಯ್ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಕಾಕ್ರಾ ಗ್ರಾಮದವರು. ಅವರು 2019 ರಲ್ಲಿ ಮೂರನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು 30 ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.
ಪರಿ ಅವರು ಅಜ್ಮೀರ್‌ನ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಅವರು ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದರು. ದೆಹಲಿ ವಿಶ್ವವಿದ್ಯಾನಿಲಯದ ಇಂದ್ರಪ್ರಸ್ಥ ಮಹಿಳಾ ಕಾಲೇಜಿನಿಂದ ಪದವಿ ಪಡೆದರು. ನಂತರ, ಅವರು ಅಜ್ಮೀರ್‌ನ ಎಂ.ಡಿ.ಎಸ್ ವಿಶ್ವವಿದ್ಯಾನಿಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಯುಪಿಎಸ್‌ಸಿ ಪರೀಕ್ಷೆ ಬರೆಯುವ ಮುನ್ನ ಅವರು ಯುಜಿಸಿ ನೆಟ್ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿದ್ದಾರೆ ಎನ್ನಲಾಗಿದೆ.
ರಾಜಸ್ಥಾನ ಪೊಲೀಸರಲ್ಲಿ ಸೇವೆ ಸಲ್ಲಿಸುತ್ತಿರುವ ಅವರ ತಾಯಿಯೇ ಪರಿ ಅವರಿಗೆ ದೊಡ್ಡ ಸ್ಫೂರ್ತಿ. ಅವರ ತಾಯಿ ಕಷ್ಟಪಟ್ಟು ಕೆಲಸ ಮಾಡುವುದನ್ನು ನೋಡಿ ಪರಿ ಅವರು ಯುಪಿಎಸ್‌ಸಿಗೆ ಪರೀಕ್ಷೆ ಬರೆಯಲು ಪ್ರೇರೇಪಣೆ ನೀಡಿತು. ಹಲವಾರು ಪೊಲೀಸ್ ಠಾಣೆಗಳಲ್ಲಿ ಎಸ್‌ಹೆಚ್‌ಒ ಆಗಿ ಸೇವೆ ಸಲ್ಲಿಸಿದ ಮೊದಲ ಮಹಿಳಾ ಅಧಿಕಾರಿಗಳಲ್ಲಿ ಅವರ ತಾಯಿಯೂ ಒಬ್ಬರು.
ಪರಿ ಬಿಷ್ಣೋಯ್ ಅವರು ಹರಿಯಾಣದ ರಾಜಕೀಯ ನಾಯಕ ಮತ್ತು ಮಾಜಿ ಹರಿಯಾಣ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗನಾದ ಭವ್ಯ ಬಿಷ್ಣೋಯ್ ಅವರನ್ನು ವಿವಾಹವಾಗಿದ್ದಾರೆ. ಇನ್ನು ಒಂದು ಸಣ್ಣ ಹಳ್ಳಿಯಿಂದ ಉತ್ತಮ ರ‍್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದ ಪರಿ ಬಿಷ್ಣೋಯ್ ಅವರು ಅನೇಕ ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.