ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಂತಿಮ ವರದಿ ಸಲ್ಲಿಕೆ ಮಾಡಿದ್ದು, ನಟನ ಆತ್ಮಹತ್ಯೆಗೆ ಯಾರೂ ಪ್ರಚೋದನೆ ಮಾಡಿಲ್ಲ ಎಂದು ತಿಳಿಸಿದೆ.
ನಟ ಸುಶಾಂತ್ ಸಿಂಗ್ ರಜಪೂತ್, 2020ರ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಫ್ಲಾಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಟನ ಸಾವಿನ ಬಗ್ಗೆ ನಾನಾ ರೀತಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ, ತಮ್ಮ ಪುತ್ರನ ಗೆಳತಿ ಮತ್ತು ನಟಿ ರಿಯಾ ಚಕ್ರವರ್ತಿ ವಿರುದ್ಧ ಮಾಡಿದ ಆರೋಪಗಳು, ಸುಶಾಂತ್ ಕುಟುಂಬದ ವಿರುದ್ಧ ಚಕ್ರವರ್ತಿ ಅವರ ಆರೋಪಗಳು, ಎರಡು ಪ್ರಕರಣಗಳಲ್ಲಿ ಇದೀಗ ಅಂತಿಮ ವರದಿಯನ್ನು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಬಿಐ ಈ ಪ್ರಕರಣವನ್ನು 2020ರ ಆಗಸ್ಟ್ನಲ್ಲಿ ಬಿಹಾರ ಪೊಲೀಸರಿಂದ ವಹಿಸಿಕೊಂಡಿತ್ತು. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿದ ನಂತರ, ಸುಶಾಂತ್ ರಜಪೂತ್ ಆತ್ಮಹತ್ಯೆಗೆ ಯಾರೂ ಪ್ರಚೋದನೆ ನೀಡಿಲ್ಲ. ಪ್ರಚೋದಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಸಂಸ್ಥೆಗೆ ದೊರೆತಿಲ್ಲ ಎಂದು ವರದಿ ಸಲ್ಲಿಸಿದೆ. ಇನ್ನು ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.