ನವದೆಹಲಿ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಹಿನ್ನಲೆಯಲ್ಲಿ ಬಡ ಮುಸ್ಲಿಂ ಕುಟುಂಬಗಳಿಗೆ BJP ಸಿಹಿಸುದ್ದಿ ನೀಡಿದ್ದು, ‘ಸೌಗತ್-ಎ-ಮೋದಿ’ ಅಭಿಯಾನದಡಿ ಈದ್ ಕಿಟ್ ವಿತರಿಸುವ ಕಾರ್ಯ ಕೈಗೊಂಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಮಂಗಳವಾರ ದೆಹಲಿಯ ನಿಜಾಮುದ್ದೀನ್ ನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ದೇಶದ ವಿವಿಧ ಪ್ರದೇಶಗಳಲ್ಲಿರುವ ಸುಮಾರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ಈದ್ ಕಿಟ್ ವಿತರಿಸುತ್ತಿದೆ. ಬಡ ಮುಸ್ಲಿಂ ಕುಟುಂಬಗಳು ಯಾವುದೇ ಕಷ್ಟವಿಲ್ಲದೆ ಹಬ್ಬವನ್ನು ಆಚರಿಸಬೇಕೆಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ರಂಜಾನ್ ಮತ್ತು ಈದ್ ಹಬ್ಬದ ಸಂದರ್ಭಗಳನ್ನು ಕೇಂದ್ರೀಕರಿಸಿ ಈ ಅಭಿಯಾನವು ಮಹತ್ವದ್ದಾಗಿದೆ. ಈ ಅಭಿಯಾನದ ಅಡಿಯಲ್ಲಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾವು 32 ಲಕ್ಷ ಮುಸ್ಲಿಂ ಕುಟುಂಬಗಳನ್ನು ತಲುಪಲು ಮತ್ತು 3 ಸಾವಿರ ಮಸೀದಿಗಳೊಂದಿಗೆ ಸಹಕರಿಸಲು ಯೋಜಿಸಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಮುಸ್ಲಿಂ ಕುಟುಂಬಗಳು ಯಾವುದೇ ತೊಂದರೆಯಿಲ್ಲದೇ, ರಂಜಾನ್ ಹಬ್ಬವನ್ನು ಆಚರಿಸಬೇಕೆಂಬುದು ಈ ಅಭಿಯಾನದ ಗುರಿಯಾಗಿದೆ. ಈ ಪ್ರಯತ್ನದ ಭಾಗವಾಗಿ, 32,000 ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ದೇಶಾದ್ಯಂತ 32,000 ಮಸೀದಿಗಳ ಸಹಕಾರದೊಂದಿಗೆ ಬಡ ಮುಸ್ಲಿಂ ಕುಟುಂಬಗಳಿಗೆ ಈ ಈದ್ ಕಿಟ್ ಗಳನ್ನು ಹಂಚಿಕೆ ಮಾಡಲು ಸಹಾಯ ಮಾಡುತ್ತಿದ್ದಾರೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು ‘ಸೌಗತ್-ಎ-ಮೋದಿ’ ಅಭಿಯಾನದ ವಿಶಾಲ ದೃಷ್ಟಿಕೋನದ ಬಗ್ಗೆ ತಿಳಿಸಿದ್ದು, ‘ರಂಜಾನ್ ಮತ್ತು ಈದ್ ಸಮಯದಲ್ಲಿ ಮಾತ್ರವಲ್ಲದೇ, ಗುಡ್ ಫ್ರೈಡೇ, ಈಸ್ಟರ್, ನೌರುಜ್ ಮತ್ತು ಹೊಸ ವರ್ಷದಂತಹ ಇತರ ಮಹತ್ವದ ಸಂದರ್ಭಗಳಲ್ಲಿಯೂ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಬಿಜೆಪಿ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಈದ್ ಮಿಲನ್ ಆಚರಣೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.
‘ಸೌಗತ್-ಎ-ಮೋದಿ’ ಅಭಿಯಾನದಡಿಯಲ್ಲಿ ವಿತರಿಸಲಾದ ಕಿಟ್ ಗಳು, ಆಹಾರ ಪದಾರ್ಥಗಳ ಜೊತೆಗೆ, ಬಟ್ಟೆ, ಶಾವಿಗೆ, ಖರ್ಜೂರ, ಡ್ರೈಫ್ರೂಟ್ಸ್ ಮತ್ತು ಸಕ್ಕರೆಯನ್ನು ಒಳಗೊಂಡಿವೆ. ಮಹಿಳೆಯರ ಕಿಟ್ ಗಳು ಬಟ್ಟೆಯನ್ನು ಒಳಗೊಂಡಿದ್ದು, ಪುರುಷರ ಕಿಟ್ ಗಳು ಕುರ್ತಾ-ಪೈಜಾಮಾಗಳನ್ನು ಒಳಗೊಂಡಿರುತ್ತವೆ ಎಂದು ಹೇಳಲಾಗಿದೆ.