ಬೆಂಗಳೂರು: “ನಾನು ಸಂವಿಧಾನ ಬದಲಾಯಿಸುವುದಾಗಿ ಹೇಳಿಲ್ಲ. ಹಾಗೆ ಹೇಳಿದ್ದರೆ ತಕ್ಷಣ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ” ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಹೈಕಮಾಂಡ್ ಸ್ಪಷ್ಟನೆ ಕೇಳಿದ ವಿಚಾರ :
“ನನ್ನ ಹೇಳಿಕೆ ಬಗ್ಗೆ ಪಕ್ಷದ ಹೈಕಮಾಂಡ್ ಸ್ಪಷ್ಟನೆ ಕೇಳಿದ್ದು ನಿಜ. ಆದರೆ ನಾನು ಯಾವುದೇ ರೀತಿಯ ಸಂವಿಧಾನ ವಿರೋಧಿ ಹೇಳಿಕೆ ನೀಡಿಲ್ಲ ಎಂಬುದನ್ನು ದಾಖಲೆಗಳ ಮೂಲಕ ಸಮರ್ಥಿಸಿಕೊಂಡಿದ್ದೇನೆ. ನನ್ನ ಸಂದರ್ಶನವನ್ನು ಸಂಪೂರ್ಣವಾಗಿ ನೋಡಿದರೆ ಸತ್ಯ ಅರಿವಾಗುತ್ತದೆ” ಎಂದು ಡಿಕೆಶಿ ಹೇಳಿದರು.
“ಬಿಜೆಪಿಯ ಆರೋಪಗಳಿಗೆ ಅರ್ಥವೇ ಇಲ್ಲ” ಎಂದ ಅವರು, “ಸಂವಿಧಾನ ಜಾರಿಗೆ ತಂದವರೇ ನಾವು, ಅದನ್ನು ರಕ್ಷಣೆ ಮಾಡುತ್ತಿರುವವರೂ ನಾವು. ಹೀಗಿರುವಾಗ, ಅದನ್ನು ಬದಲಾಯಿಸಲು ನಾನು ಹೇಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ತಮ್ಮ ರಾಜಕೀಯ ಲಾಭಕ್ಕಾಗಿ ಸುಳ್ಳು ಪ್ರಚಾರ ಮಾಡುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನ ಬದಲಾವಣೆಯ ಬಗ್ಗೆ ಭ್ರಮೆ :
“ನಾನು ಯಾವ ಸಂದರ್ಶನದಲ್ಲೂ ಸಂವಿಧಾನ ಬದಲಾವಣೆ ಕುರಿತು ಹೇಳಿಲ್ಲ. ನಾನು ಸುಳ್ಳು ಮಾತನಾಡಲು ಬರುವ ವ್ಯಕ್ತಿ ಅಲ್ಲ. ನಾನು ಹೇಳಿದ್ದನ್ನು ಸರಿಯಾಗಿ ನೋಡಲಿ. ಸಂವಿಧಾನ ಬದಲಾಯಿಸುವುದು ಬಿಜೆಪಿ ನಾಯಕರು ಮಾಡಿರುವ ಮಾತು” ಎಂದರು.
ಕಪ್ಪು ಬಾವುಟ ಪ್ರದರ್ಶನಕ್ಕೆ ತಿರುಗೇಟು :
“ನಾನು ಹೋದ ಕಡೆ ಬಿಜೆಪಿ ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧರಿಸಿದೆ ಎಂಬ ವಿಷಯ ಕೇಳಿ ನಗೆ ಬರುತ್ತಿದೆ. ಅವರಿಗೆ ನನ್ನ ಹೆಸರು ಉಲ್ಲೇಖಿಸದೇ ನಿದ್ದೆ ಬರುವುದಿಲ್ಲ. ತಮಿಳುನಾಡಿನಲ್ಲಿ ನಾನು ಕಪ್ಪು ಬಾವುಟ ನಿರೀಕ್ಷಿಸಿದ್ದೆ, ಆದರೆ ಮಾಧ್ಯಮಗಳ ಮೈಕ್ ಹೊರತುಪಡಿಸಿ ಬೇರೆ ಏನೂ ಕಾಣಲಿಲ್ಲ” ಎಂದು ಡಿಕೆಶಿ ವ್ಯಂಗ್ಯವಾಡಿದರು.
ಹೈಕಮಾಂಡ್ ಸ್ಪಷ್ಟನೆ ಪಡೆದಿದೆ :
“ನಾನು ಏನು ಮಾತನಾಡಿದ್ದೇನೆ ಎಂಬುದು ನನ್ನ ಪಕ್ಷದ ಹಿರಿಯರಿಗೆ ಗೊತ್ತಿದೆ. ಹೈಕಮಾಂಡ್ ನನ್ನ ವಿವರಗಳನ್ನು ಪರಿಶೀಲಿಸಿದ ನಂತರ ನಾನು ಸಂವಿಧಾನ ವಿರೋಧಿ ಹೇಳಿಕೆ ನೀಡಿಲ್ಲ ಎಂಬುದು ಅವರಿಗೆ ಅರಿವಾಗಿದೆ” ಎಂದರು.