ಚಿತ್ರದುರ್ಗ : ನಗರದ 35 ವಾರ್ಡ್ಗಳಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಿದ್ದು, ಜನರಿಗೆ ಉತ್ತರ ಕೊಡಲು ಆಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದೇವೆಂದು ಬಹುತೇಕ ಸದಸ್ಯರುಗಳು ನಗರಸಭೆ ಅಧ್ಯಕ್ಷರು, ಪೌರಾಯುಕ್ತರ ವಿರುದ್ದ ಹರಿಹಾಯ್ದರು.
ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು.
ನಗರಸಭೆಯ 34 ನೇ ವಾರ್ಡ್ ಸದಸ್ಯ ಹೆಚ್.ಶ್ರೀನಿವಾಸ್ ಟ್ರಾನ್ಸ್ಫಾರ್ಮರ್ ಕೈಕೊಟ್ಟಿದೆ ಎಂದು ಸಬೂಬು ಹೇಳಿಕೊಂಡು ಕಾಲ ಕಳೆಯುವುದರಲ್ಲಿ ಅರ್ಥವಿಲ್ಲ. ಬೇಸಿಗೆ ಆರಂಭವಾಗಿರುವುದರಿಂದ ಎಲ್ಲಾ ವಾರ್ಡ್ಗಳಲ್ಲಿಯೂ ಸಮರ್ಪಕವಾಗಿ ನೀರು ಪೂರೈಕೆಯಾಗುಬೇಕು. ವಾರ್ಡ್ನ ಜನ ನಮ್ಮನ್ನು ಪ್ರಶ್ನಿಸುತ್ತಿದ್ದಾರೆಂದು ತರಾಟೆ ತೆಗೆದುಕೊಂಡಾಗ ನಗರದ 35 ವಾರ್ಡ್ಗಳಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಬೇಕೆಂಬ ಆಸಕ್ತಿ ನನ್ನಲ್ಲಿದೆ. ಆದರೆ ಪೌರಾಯುಕ್ತರು ಮತ್ತು ಸಿಬ್ಬಂದಿಗಳು ಸಹಕರಿಸುತ್ತಿಲ್ಲವೆಂದು ಅಧ್ಯಕ್ಷೆ ಸುಮಿತ ತನ್ನ ಅಸಹಾಯಕತೆಯನ್ನು ತೋರ್ಪಡಿಸಿದರು.
ಟಿ.ಸಿ.ಸುಟ್ಟರೆ ಸರಿಪಡಿಸಲು ಎಷ್ಟು ದಿನ ಬೇಕು. ನಗರದಲ್ಲಿ ನೀರಿನ ಸಮಸ್ಯೆಯಿದೆ ಎನ್ನುವುದು ಗೊತ್ತಿದೆ. ಎಂದಾದರೂ 35 ಸದಸ್ಯರುಗಳ ಸಭೆ ಕರೆದು
ಚರ್ಚಿಸಿ ಪರಿಹಾರಕ್ಕಾಗಿ ಏನಾದರೂ ಕ್ರಮ ಕೈಗೊಂಡಿದ್ದೀರ ಎಂದು ಸದಸ್ಯ ದೀಪು ಅಧ್ಯಕ್ಷೆ ಮತ್ತು ಪೌರಾಯುಕ್ತರನ್ನು ಪ್ರಶ್ನಿಸಿದರು?
ಮಾ.7 ನೇ ತಾರೀಖು ಟಿ.ಸಿ.ಸುಟ್ಟಿದೆ. ಸರಿಪಡಿಸುವ ಪ್ರಯತ್ನದಲ್ಲಿದ್ದೇನೆ ಎಂದು ಇಂಜಿನಿಯರ್ ಮುನಿಸ್ವಾಮಿ ಸಾಮಾನ್ಯ ಸಭೆಯ ಗಮನಕ್ಕೆ ತಂದಾಗ ಸದಸ್ಯರುಗಳ ಮಾತು ಕೇಳುತ್ತಿಲ್ಲ. ಈತನನ್ನು ಅಮಾನತ್ತುಗೊಳಿಸಿ ಎಂದು 25 ನೇ ವಾರ್ಡ್ ಸದಸ್ಯ ಜೈನುಲ್ಲಾಬ್ದಿನ್ ಪಟ್ಟು ಹಿಡಿದರು.
ಯುಗಾದಿ-ರಂಜಾನ್ ಹಬ್ಬ ಸಮೀಪಿಸುತ್ತಿದೆ. ಯಾವುದೇ ಕಾರಣಕ್ಕೂ ನೀರಿಗೆ ತೊಂದರೆಯಾಗಬಾರದೆಂದು ಸದಸ್ಯರುಗಳು ಒತ್ತಡ ಹೇರಿದಾಗ ಸಂಜೆಯೊಳಗೆ ಟ್ರಾನ್ಸ್ಫಾರ್ಮರ್ ತಂದು ನಾಳೆಯಿಂದಲೆ ನೀರಿನ ವ್ಯವಸ್ಥೆ ಮಾಡಲಾಗುವುದು. ನಾಲ್ಕೈದು ವಾರ್ಡ್ಗಳಲ್ಲಿ ಟ್ಯಾಂಕರ್ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಎರಡು ದಿನ ಸಮಯ ಕೊಡಿ ಖಾಸಗಿ ಟ್ಯಾಂಕರ್ಗಳನ್ನು ಖರೀಧಿಸಿ ಎಲ್ಲೆಲ್ಲಿ ನೀರಿನ ಸಮಸ್ಯೆಯಿದೆಯೋ ಅಲ್ಲೆಲ್ಲಾ ಕುಡಿಯುವ ನೀರು ನೀಡಲಾಗುವುದೆಂದು ಪೌರಾಯುಕ್ತರು ಭರವಸೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಂಜುನಾಥ್ಗೊಪ್ಪೆ ಅಧ್ಯಕ್ಷರು, ಪೌರಾಯುಕ್ತರು ಹಾಗೂ ಇಂಜಿನಿಯರ್ಗಳ ನಡುವೆ ಸಮನ್ವಯದ ಕೊರತೆಯಿದೆ. ಯುಗಾದಿ ರಂಜಾನ್ ಹಬ್ಬ ಕೇವಲ ನಾಲ್ಕು ದಿನಗಳಿದೆ. ವಾರ್ಡ್ನಲ್ಲಿ ಜನರಿಗೆ ಏನು ಉತ್ತರ ಕೊಡಬೇಕೆಂಬುದೇ ತೋಚುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಯಿರುವ ಕಡೆ ಮೊದಲು ಗಮನ ಕೊಡಿ ಎಂದು ತಾಕೀತು ಮಾಡಿದರು.
ಆರೇಳು ಸಭೆಗಳಾಗಿದೆ. ಕೆ.ಡಿ.ಪಿ.ಸಭೆಯಲ್ಲಿಯೂ ಶಾಸಕರು ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಇದುವರೆವಿಗೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಶಶಿ
ಪೌರಾಯುಕ್ತರು ಹಾಗೂ ಅಧ್ಯಕ್ಷರನ್ನು ಪ್ರಶ್ನಿಸಿದರು?
ನಮ್ಮಲ್ಲಿ ಸಮನ್ವಯತೆಯಿದೆ. ಆದರೆ ಪೌರಾಯುಕ್ತರು ನಾನೆ ಸುಪ್ರಿಂ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಗಾಂಧಿವೃತ್ತದ ಸಮೀಪ ಒತ್ತುವರಿಯಾಗಿರುವ ಕಟ್ಟಡಗಳನ್ನು ರಾತ್ರೋರಾತ್ರಿ ಪೌರಾಯುಕ್ತರು ತೆರವುಗೊಳಿಸಿದ್ದು, ನನ್ನ ಗಮನಕ್ಕೆ ಬರಲಿಲ್ಲ. ಗಾಂಧಿ ಸರ್ಕಲ್ನಲ್ಲಿ ಏಕೆ ಬೋರ್ಡ್ ಹಾಕಿಲ್ಲ ಎಂದು ಅಧ್ಯಕ್ಷರು ಪೌರಾಯುಕ್ತರನ್ನು ಪ್ರಶ್ನಿಸಿದಾಗ ತಪ್ಪು ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುತ್ತೇನೆಂದು ಉತ್ತರಿಸಿದರು.
ಆದಿಶಕ್ತಿ ನಗರದಲ್ಲಿ ಒತ್ತುವರಿಯಾಗಿದ್ದ ಸ್ಥಳದಲ್ಲಿ ಇದು ನಗರಸಭೆ ಆಸ್ತಿಯೆಂದು ಬೋರ್ಡ್ ಹಾಕಿಸಿದ್ದೇನೆ. ಒಳಗಿಂದೊಳಗೆ ಮಾರಾಟ ಮಾಡುವ ಸಂಚು ನಡೆಯುವಂತಿದೆ. ಸಿ.ಐ.ಡಿ.ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿರಲಿ ಜೈಲಿಗೆ ಕಳಿಸುತ್ತೇನೆಂದು ಸದಸ್ಯ ಹೆಚ್.ಶ್ರೀನಿವಾಸ್ ಎಚ್ಚರಿಸಿದರು.
37 ಮಳಿಗೆಗಳ ಹರಾಜು ಏನಾಯಿತು? ಕೇಳಿ ಎಂದು ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಸದಸ್ಯರುಗಳನ್ನು ಪುಸಲಾಯಿಸಿದರು. ಇದಕ್ಕೆ ಮಾಜಿ ಅಧ್ಯಕ್ಷ ಮಂಜುನಾಥ್ಗೊಪ್ಪೆ ಅಪ್ರೂವಲ್ ನೀಡಿ ಐದು ತಿಂಗಳಾಯಿತು. ಜಿಲ್ಲಾಧಿಕಾರಿ ನೋಟಿಸ್ ಕೊಟ್ಟಿದ್ದರು ಇನ್ನು ಉತ್ತರಿಸಿಲ್ಲ ಎಂದು ಪೌರಾಯುಕ್ತರ ಮೇಲೆ ಕಿಡಿಕಾರಿದರು.