ಜಪಾನಿಯರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ನಿಸ್ಸೀಮರು. ದೈನಂದಿನ ಜೀವನದ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಅವರ ಮನಸ್ಸು ಸದಾ ಹುಡುಕಾಟದಲ್ಲಿರುತ್ತದೆ. ಜನಸಂಖ್ಯೆಯಲ್ಲಿ ಹಿರಿಯರ ಪ್ರಮಾಣ ದಿನೇ ದಿನೆ ಹೆಚ್ಚುತ್ತಿರುವುದರಿಂದ, ಹಿರಿಯರ ಆರೈಕೆಯ ಸಮಸ್ಯೆಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವುದು ಅವರಿಗೆ ಅನಿವಾರ್ಯವೂ ಹೌದು. ಈ ನಿಟ್ಟಿನಲ್ಲಿ, ಹಿರಿಯರ ಆರೈಕೆ ರೋಬೋಟ್ಗಳು ಒಂದು ಮಹತ್ವ ಪೂರ್ಣಹೆಜ್ಜೆ. ಇದು ವೃದ್ಧರ ದೈನಂದಿನ ಜೀವನ ಸುಲಭಗೊಳಿಸುವಲ್ಲಿ ಮತ್ತು ಆರೈಕೆ ನೀಡುವವರು ಅನುಭವಿಸುವ ಭಾರವನ್ನು ಕಡಿಮೆ ಮಾಡುವಲ್ಲಿ ನೆರವಾಗಿದೆ.
ಜಪಾನ್ ವಿಶ್ವದ ಅತಿ ಹೆಚ್ಚು ವೃದ್ಧ ಜನಸಂಖ್ಯೆಯುಳ್ಳ ದೇಶಗಳಲ್ಲಿ ಒಂದು. 2020ರಲ್ಲಿ 65 ವರ್ಷ ಮೇಲ್ಪಟ್ಟ ಜನರು ಒಟ್ಟಾರೆ ಜನಸಂಖ್ಯೆಯ ಶೇ.28ಕ್ಕೂ ಅಧಿಕರಾಗಿದ್ದರು. ಈ ಪ್ರಮಾಣ 2050 ವೇಳೆಗೆ ಶೇ.35 ಆಗುವ ನಿರೀಕ್ಷೆಯಿದೆ. ಜನಸಂಖ್ಯೆಯ ವೃದ್ಧಿ ಮತ್ತು ಜನನ ಪ್ರಮಾಣದ ಕುಸಿತದ ಕಾರಣದಿಂದ, ಹಿರಿಯರ ಆರೈಕೆಗೆ ಅಗತ್ಯವಿರುವ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಕುಟುಂಬದ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿದೆ.
ಈ ಕಾರಣಗಳಿಂದಾಗಿ, ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಪರಿಹಾರಗಳನ್ನು ಹುಡುಕುವುದು ಅನಿವಾರ್ಯ. ಹಿರಿಯರ ಆರೈಕೆಗಾಗಿ ವಿನ್ಯಾಸಗೊಳಿಸಲಾದ ರೋಬೋಟ್ಗಳು ಶಾರೀರಿಕ ಮತ್ತು ಮಾನಸಿಕ ಆರೈಕೆಯಲ್ಲಿ ನೆರವಾಗುತ್ತಿದೆ. ಇವು ಹಲವಾರು ಕಾರ್ಯಗಳನ್ನು ನಿರ್ವಹಿಸಬಲ್ಲವು, ಉದಾ ಹರಣೆಗೆ, ಹಿರಿಯರು ಸುಲಭವಾಗಿ ನಡೆಯಲು, ಅವಶ್ಯಕ ಔಷಧಗಳನ್ನು ಸರಿಯಾದ ಸಮಯಕ್ಕೆ ಸೇವಿಸಲು, ಒಂಟಿತನವನ್ನು ಕಡಿಮೆ ಮಾಡಲು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು, ಮಲಗಲು, ಕಾಲಕಾಲಕ್ಕೆ ಎಬ್ಬಿಸಲು, ಸ್ನಾನ ಮಾಡಲು ಈ ರೊಬೋಟುಗಳು ಸಹಾಯ ಮಾಡುತ್ತವೆ.
ಕೆಲವು ರೋಬೋಟ್ಗಳು ಹಿರಿಯರೊಂದಿಗೆ ಮಾತಾಡುವುದಷ್ಟೇ ಅಲ್ಲ, ಅವರಿಗೆ ಕ್ವಿಜ್ ನಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತವೆ, ಅವರಿಗೆ ಜೋಕುಗಳನ್ನು ಹೇಳಿ ನಗಿಸುತ್ತವೆ.
ರೋಬೋಟ್ಗಳು ದುಬಾರಿಯಾಗಿದ್ದು, ಎಲ್ಲರೂ ಖರೀದಿಸಲು ಸಾಧ್ಯವಿಲ್ಲ. ಈ ರೋಬೋಟ್ಗಳು ಮನುಷ್ಯರ ಹಾಗೆ ಆರೈಕೆ ಮಾಡಲು ಸಾಧ್ಯವಿಲ್ಲ, ಏಕೆಂದರೆ, ಇವುಗಳಿಗೆ ಭಾವನಾತ್ಮಕ ಸಂಪರ್ಕವೇ ಇಲ್ಲ.
ಹೆಚ್ಚು ಜನರಿಗೆ ಈ ತಂತ್ರಜ್ಞಾನವನ್ನು ತಲುಪಿಸಲು, ಕಡಿಮೆ ದರದಲ್ಲಿ ಲಭ್ಯವಾಗುವ ರೋಬೋಟ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಂಟರ್ನೆಟ್ ಆಫ್ ಥಿಂಗ್ಸ್ ಸಹಾಯದಿಂದ, ಈ ರೋ ಬೋಟ್ಗಳು ಆರೋಗ್ಯ ಮಾಹಿತಿಯನ್ನು ನೇರವಾಗಿ ವೈದ್ಯರಿಗೆ ಕಳಿಸುವ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಹಿರಿಯರ ಆರೈಕೆ ರೋಬೋಟ್ಗಳು ಜಪಾನಿನಲ್ಲಿ ದೊಡ್ಡ ಪರಿವರ್ತನೆಯನ್ನು ತರಲು ಪ್ರಾರಂಭಿಸಿರುವುದು ಸಮಾಧಾನಕರ ಸಂಗತಿಯೇ.