ಮಂಗಳೂರು: ಬೆಳ್ತಂಗಡಿಯ ಬೆಳಾಲು ಗ್ರಾಮದ ಕಾಡಿನಲ್ಲಿ 3 ತಿಂಗಳ ಹೆಣ್ಣು ಮಗುವೊಂದು ಪತ್ತೆಯಾದ ಪ್ರಕರಣ ಕೊನೆಗೂ ಸುಖಾಂತ್ಯದ ಹಂತಕ್ಕೆ ತಲುಪಿದೆ.
ಇದೀಗ ಪ್ರಕರಣದಲ್ಲಿ ಮಗುವಿನ ಪೋಷಕರನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದಾರೆಂದು ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯ ನಿವಾಸಿ ತಿಮ್ಮಪ್ಪ ಗೌಡರ ಮಗ ಧರ್ಮಸ್ಥಳದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ರಂಜಿತ್ ಗೌಡ (27) ಮತ್ತು ಧರ್ಮಸ್ಥಳ ಗ್ರಾಮದ ಕೊಲಂಗಾಜೆಯ ಸುಶ್ಮಿತಾ ಪತ್ತೆಯಾದ ಮಗುವಿನ ತಂದೆ-ತಾಯಿ ಎಂದು ತಿಳಿದು ಬಂದಿದ್ದು, ಇದೀಗ ರಂಜಿತ್ ಗಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ರಂಜಿತ್ ಮತ್ತು ಸುಶ್ಮಿತಾ ಪ್ರೀತಿಸುತ್ತಿದ್ದು, ಈ ನಡುವೆ ಸುಶ್ಮಿತಾ ಗರ್ಭಿಣಿಯಾಗಿದ್ದಳು. ಇತ್ತೀಚೆಗೆ ಸುಶ್ಮಿತಾ ಳಿಗೆ ಸಹಜ ಹೆರಿಗೆ ಆಗಿದ್ದು, ಮಗುವನ್ನು ಹೆರಿಗೆಯ ಕೆಲ ದಿನಗಳ ಬಳಿಕ ರಂಜಿತ್ ಗೆ ನೀಡಿದ್ದಳು.
ರಂಜಿತ್ ಮಾ.22ರಂದು ಬೆಳಗ್ಗೆ ಮಗುವನ್ನು ಕಾಡಿನಲ್ಲಿ ಬಿಟ್ಟು ತೆರಳಿದ್ದ ಎನ್ನಲಾಗಿದೆ. ಬೆಳಾಲಿನ ಕಾಡು ಪ್ರದೇಶದಲ್ಲಿ ಪತ್ತೆಯಾದ ಮಗುವನ್ನು ಸಾರ್ವಜನಿಕರು ರಕ್ಷಿಸಿ ಆರೈಕೆ ಮಾಡಿದ್ದರು.
ನಂತರ ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಪುತ್ತೂರು ಅಶ್ರಮಕ್ಕೆ ಹಸ್ತಾಂತರಿಸಿದ್ದರು.