ಮಡಿಕೇರಿ : ಬಿಜೆಪಿಯ ಸಕ್ರಿಯ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಇಬ್ಬರು ಶಾಸಕರ ಹೆಸರು ಎಫ್ಐಆರ್ನಲ್ಲಿ ಉಲ್ಲೇಖಿಸುವ ವರೆಗೆ ನಾವಿಲ್ಲೇ ಕಾಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಎಚ್ಚರಿಸಿದ್ದಾರೆ.
ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಹೆಸರು ಎಫ್ಐಆರ್ನಲ್ಲಿ ಸೇರಿಸದೆ ಇದ್ದರೆ ಮುಂದೆ ಆಗುವುದಕ್ಕೆ ಅವರೇ ಹೊಣೆಗಾರರು. ನಾವು ಜವಾಬ್ದಾರರಲ್ಲ ಎಂದು ತಿಳಿಸಿದರು.ಒಂದು ಗಂಟೆ ಶಾಂತಿಯುತವಾಗಿ ಕಾಯುತ್ತೇವೆ ಎಂದು ಎಸ್ಪಿಯವರಿಗೂ ತಿಳಿಸಿದ್ದಾಗಿ ಹೇಳಿದರು. ಹಿರಿಯ ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದಿರಿ ಎಂದ ಅವರು, ಒಬ್ಬ ಅಮಾಯಕ ಬಿಜೆಪಿ ಕಾರ್ಯಕರ್ತ ಅಂದರೆ ಅವರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದರು.
ತುಘಲಕ್ ದರ್ಬಾರ್ ನಡೆಸುತ್ತಿದ್ದಾರಾ?
ಆಡಳಿತ ಪಕ್ಷದ ಶಾಸಕರ ವೈಫಲ್ಯಗಳನ್ನು ಹೇಳಬಾರದೆಂದರೆ ಇದೇನು ಕಾಂಗ್ರೆಸ್ಸಿನವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು.ಶಾಸಕರು ಏನೆಂದುಕೊಂಡಿದ್ದಾರೆ? ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಅವರು ನುಡಿದರು.ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಇದನ್ನು ಹಗುರವಾಗಿ ಪರಿಗಣಿಸದಿರಿ ಎಂದರಲ್ಲದೆ, ಹಿಂದೆ ಗುಲ್ಬರ್ಗದಲ್ಲಿ, ಯಾದಗಿರಿ ಪರಶುರಾಂ ಆತ್ಮಹತ್ಯೆ ಪ್ರಕರಣದಲ್ಲಿ ಏನಾಗಿದೆ? ಎಂದು ಕೇಳಿದರು. ಸಚಿನ್ ಪ್ರಕರಣದಲ್ಲಿ ಏನಾಗಿದೆ? ಅಧಿಕಾರಿ ಚಂದ್ರಶೇಖರ್ ಪ್ರಕರಣದಲ್ಲಿ ಏನಾಗಿದೆ ಎಂಬುದು ರಾಜ್ಯದ ಜನರ ಕಣ್ಮುಂದೆ ಇದೆ ಎಂದು ಗಮನ ಸೆಳೆದರು.
ಬೆಂಗಳೂರಿನಲ್ಲಿ ಎಫ್ಐಆರ್ನಲ್ಲಿ ಶಾಸಕರ ಹೆಸರನ್ನು ಉಲ್ಲೇಖಿಸದ ಅಯೋಗ್ಯರ ಜವಾಬ್ದಾರಿ ಇದು. ಅವರು ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಅನುಮತಿ ಪಡೆದು ಶಾಸಕರ ಹೆಸರು ಸೇರಿಸಬೇಕು. ಇದು ಅಧಿಕಾರಿಗಳ ಕರ್ತವ್ಯ ಎಂದು ಎಚ್ಚರಿಸಿದರು. ಈ ಕುರಿತು ಎಸ್ಪಿಗೂ ತಿಳಿಸಿದ್ದಾಗಿ ಹೇಳಿದರು. ಗೃಹ ಸಚಿವರೂ ಇದನ್ನು ಗಮನಿಸಬೇಕು ಎಂದು ತಿಳಿಸಿದರು. ಮುಂದೆ ಆಗುವ ಹೆಚ್ಚು ಕಡಿಮೆಗೆ ನಾವು ಹೊಣೆಗಾರರಲ್ಲ ಎಂದು ಎಸ್ಪಿಯವರಿಗೂ ತಿಳಿಸಿದ್ದಾಗಿ ವಿವರಿಸಿದರು.