ನವದೆಹಲಿ: 2008 – 26/11ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನ್ನನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದ್ದು ಗುರುವಾರ ಬೆಳಗ್ಗೆ ಭಾರತಕ್ಕೆ ಬರಲಿದ್ದಾನೆ.
ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಮೆರಿಕಾ ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದ್ದು, ಪ್ರಸ್ತುತ ರಾಣಾ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿದ್ದು, ಕಳೆದ ಫೆಬ್ರವರಿಯಲ್ಲಿ ಒಂಬತ್ತನೇ ಸರ್ಕ್ಯೂಟ್‌ನ ಸರ್ಕ್ಯೂಟ್ ನ್ಯಾಯಾಧೀಶರಿಗೆ ಹಸ್ತಾಂತರವನ್ನು ತಡೆಹಿಡಿಯಲು ತುರ್ತು ಅರ್ಜಿಯನ್ನು ಸಲ್ಲಿಸಿದ್ದರು.
ಆದರೆ, ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ನಂತರ, ರಾಣಾ ಮತ್ತೆ ತುರ್ತು ಅರ್ಜಿಯನ್ನು ಸಲ್ಲಿಸಿ ವಿನಾಯಿತಿ ಕೇಳಿದ್ದರು. ಆದರೆ, ಸುಪ್ರೀಂ ಕೋರ್ಟ್ ಈ ಮನವಿಯನ್ನು ನಿರಾಕರಿಸಿದೆ. 2009ರಿಂದಲೂ ರಾಣಾನನ್ನ ಭಾರತಕ್ಕೆ ಕರೆತರಲು ಭಾರತ ಹೋರಾಡುತ್ತಿದೆ. ಇತ್ತೀಚೆಗೆ ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಟ್ರಂಪ್ ಮೋದಿ ಎದುರಲ್ಲೇ ಭಾರತಕ್ಕೆ ರಾಣಾನನ್ನ ಹಸ್ತಾಂತರಿಸುವುದಾಗಿ ಘೋಷಣೆ ಮಾಡಿದ್ದರು.
ಇದೀಗ ಅಮೆರಿಕಾ ಸುಪ್ರೀಂಕೋರ್ಟ್ ರಾಣಾ ಮೇಲ್ಮನವಿಯನ್ನು ತಿರಸ್ಕರಿಸಿರುವುದು, ರಾಣಾನನ್ನು ಭಾರತಕ್ಕೆ ಮರಳಿ ಕರೆತರುವ ದಾರಿ ಮತ್ತಷ್ಟು ಸುಗಮವಾಗುವಂತೆ ಮಾಡಿದೆ. ಅಮೆರಿಕದ ನ್ಯಾಯಾಲಯದ ಶಿಫಾರಸುಗಳಿಗೆ ಅನುಗುಣವಾಗಿ, ದೆಹಲಿ ಮತ್ತು ಮುಂಬೈನ ಎರಡು ಜೈಲುಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಜಾರಿ ಮಾಡಲಾಗಿದೆ. ಭಾರತಕ್ಕೆ ಬಂದ ನಂತರ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಿದೆ.