ಬೆಂಗಳೂರು: ನಮ್ಮ ಮೆಟ್ರೋ ನಿರ್ಮಾಣ ಕಾರ್ಯದಲ್ಲಿ ಸುರಕ್ಷತಾ ಲೋಪಕ್ಕೆ ಮತ್ತೊಂದು ದುರಂತ ಸಂಭವಿಸಿದೆ. ಯೋಜನೆಗಾಗಿ ಸಾಗಿಸಲಾಗುತ್ತಿದ್ದ ಬೃಹತ್ ವಯಾಡಕ್ಟ್ ಟ್ರಕ್‌ನಿಂದ ಬಿದ್ದು ಆಟೋರಿಕ್ಷಾವೊಂದು ಜಖಂಗೊಂಡ ಪರಿಣಾಮ ಅದರ ಚಾಲಕ ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ಕೋಗಿಲು ಕ್ರಾಸ್ ಬಳಿ ನಡೆದಿದೆ.
ನಮ್ಮ ಮೆಟ್ರೋ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್ ಸಮತೋಲನ ತಪ್ಪಿ, ವಯಾಡಕ್ಟ್ ನಿಂತಿದ್ದ ಆಟೋ ಮೇಲೆ ಉರುಳಿ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಜನ ಆತನ ರಕ್ಷಣೆಗೆ ದಾವಿಸಿದ್ದರು. ಆದರೆ ಬೃಹತ್ ಗಾತ್ರದ ವಯಾಡೆಕ್ಟ್ ತೆಗೆಯಲು ಕ್ರೇನ್ ಅತ್ಯಗತ್ಯವಾಗಿತ್ತು. ಸ್ಥಳಕ್ಕೆ ಪೊಲೀಸರು ಬಂದರೂ ಸಹ ಕ್ರೇನ್ ಮಾತ್ರ ಬರಲು ತಡವಾಯಿತು. ಇದರಿಂದ ಆಕ್ರೋಶಗೊಂಡ ಜನ ಕಲ್ಲುತೂರಾಟ ಸಹ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಎರಡು ಗಂಟೆ ಬಳಿ ಕ್ರೇನ್ ತರಿಸಿ ವಯಾಡೆಕ್ಟ್ ಪಕ್ಕಕ್ಕೆ ಇಡುವ ಮೂಲಕ ಮೃತದೇಹ ಹೊರ ತೆಗೆಯಲಾಗಿದೆ. ಇನ್ನು ಈ ದುರಂತಕ್ಕೆ ಮೆಟ್ರೋ ಅಧಿಕಾರಿಗಳ ಬೇಜವಾಬ್ದಾರಿ ತನವೇ ಕಾರಣ ಅಂತ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವಯಾಡೆಕ್ಟ್ ಮುಗುಚಿ ಆಟೋ ಮೇಲೆ ಬಿದ್ದ ತಕ್ಷಣ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.