ಮುಂಬೈ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಅನೇಕ ಬದಲಾವಣೆಗಳಾಗುತ್ತಿವೆ. ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಬಣದ ನಡುವೆ ಸಂಬಂಧ ಹಳಸಿದ್ದು, ಇದೀಗ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಸೋದರರು ಒಂದಾಗುವ ಸುಳಿವು ನೀಡಿದ್ದಾರೆ.
ಶನಿವಾರ ಬಿಡುಗಡೆಯಾದ ಮಹೇಶ್ ಮಾಂಜ್ರೇಕರ್ ಪೊಡ್‌ಕಾಸ್ಟ್ನಲ್ಲಿ ಮಾತನಾಡಿದ ರಾಜ್ ಠಾಕ್ರೆ ಅವರು, ಮಹಾರಾಷ್ಟ್ರದ ಹಿತಾಸಕ್ತಿಗೆ ಉದ್ಧವ್ ಠಾಕ್ರೆ ಮತ್ತು ನನ್ನ ನಡುವಿನ ಭಿನ್ನಾಭಿಪ್ರಾಯ ಧಕ್ಕೆ ಉಂಟು ಮಾಡಿದೆ. ಉದ್ಧವ್ ಹಾಗೂ ನನ್ನ ನಡುವೆ ಸಣ್ಣಪುಟ್ಟ ಜಗಳವಿದೆ, ವಿವಾದವಾಗಿದೆ. ಆದರೆ ಮಹಾರಾಷ್ಟ್ರ ಇದೆಲ್ಲಕ್ಕಿಂತ ದೊಡ್ಡದು. ಈ ಭಿನ್ನಾಭಿಪ್ರಾಯ ಮಹಾರಾಷ್ಟ್ರಹಾಗೂ ಮರಾಠಿ ಜನತೆಯ ಅಸ್ತಿತ್ವಕ್ಕೆ ದುಬಾರಿಯಾಗಿದೆ. ಇಬ್ಬರು ಒಗ್ಗೂಡುವುದು ಕಷ್ಟವೇನಲ್ಲ ಎಂದು ಹೇಳಿದ್ದಾರೆ.
ಶಾಸಕರು, ಸಂಸದರು ನನ್ನ ಜೊತೆಗಿದ್ದರು. ಆದರೂ ನಾನು ಏಕಾಂಗಿಯಾಗಿ ಸಾಗುವ ತೀರ್ಮಾನ ಕೈಗೊಂಡೆ. ಬಾಳಾ ಸಾಹೇಬ್ ಒಬ್ಬರನ್ನು ಹೊರತುಪಡಿಸಿ ಬೇರೆ ಯಾರ ಕೈಕೆಳಗೆ ಸಹ ಕೆಲಸ ಮಾಡಲು ನನಗೆ ಸಾಧ್ಯವಾಗದು. ಉದ್ಧವ್ ಜೊತೆ ಕೆಲಸ ಮಾಡಲು ನನಗೂ ಅಭ್ಯಂತರವಿಲ್ಲ. ಆದರೆ ಇನ್ನೊಂದು ಕಡೆಯವರಿಗೂ ನನ್ನ ಜೊತೆ ಕೆಲಸ ಮಾಡಲು ಇಷ್ಟವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಮರುಮಿಲನದ ಸಾಧ್ಯತೆಯನ್ನು ಬೆಂಬಲಿಸಿದ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್, ರಾಜ್ ಠಾಕ್ರೆ, ಉದ್ಧವ್ ಕೂಡ ಅವರ ಸಂಬಂಧ ಶಾಶ್ವತವಾದುದು. ರಾಜಕೀಯ ಮಾರ್ಗಗಳು ಭಿನ್ನವಾಗಿರಬಹುದು, ಆದರೆ ಉದ್ಧವ್ ಯಾವಾಗಲೂ ಮಹಾರಾಷ್ಟ್ರದ ಕಲ್ಯಾಣಕ್ಕೆ ಆದ್ಯತೆ ನೀಡಿದ್ದಾರೆ. ಉದ್ಧವ್‌ಗೆ ರಾಜ್ ಅವರೊಂದಿಗೆ ಯಾವುದೇ ವೈಯಕ್ತಿಕ ವಿವಾದವಿಲ್ಲ. ಅವರ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ತ್ವರಿತವಾಗಿ ಪರಿಹರಿಸಬಹುದು ಎಂದಿದ್ದಾರೆ.
ಮಹಾರಾಷ್ಟ್ರದ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡುವವರ ವಿರುದ್ಧ ರಾಜ್ ಠಾಕ್ರೆ ದೃಢವಾದ ನಿಲುವು ತೆಗೆದುಕೊಳ್ಳಬೇಕು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದ ಶತ್ರುಗಳಿಗೆ ಯಾವುದೇ ಬೆಂಬಲ ಸಿಗಬಾರದು ಎಂದು ನಾವು ಸ್ಪಷ್ಟಪಡಿಸಿದ್ದೇವೆ. ರಾಜ್ ಠಾಕ್ರೆ ಈ ನಿಲುವನ್ನು ಅಳವಡಿಸಿಕೊಳ್ಳಲು ಸಿದ್ಧರಿದ್ದರೆ, ಮಾತುಕತೆಗಳು ಮುಂದುವರಿಯಬಹುದು ಎಂದು ತಿಳಿಸಿದ್ದಾರೆ.
ಇಬ್ಬರೂ ಠಾಕ್ರೆಗಳು ಒಂದಾಗುವುದಾದರೆ, ಮಹಾರಾಷ್ಟ್ರ ಈ ಬೆಳವಣಿಗೆಯನ್ನು ಸ್ವಾಗತಿಸುತ್ತದೆ. ಮಹಾರಾಷ್ಟ್ರದ ರಾಜಕೀಯದಿಂದ ಠಾಕ್ರೆ ಗುರುತನ್ನು ಅಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.