ದಾವಣಗೆರೆ : ಮೂರನೇ ಹಂತದ ಜನಾಕ್ರೋಶ ಯಾತ್ರೆಯು ಇಂದು ಆರಂಭವಾಗಲಿದ್ದು, ದಾವಣಗೆರೆ, ಹಾವೇರಿ ಜಿಲ್ಲೆಯ ಮೂಲಕ ನಾಳೆ ಗದಗ, ಕೊಪಳ ಜಿಲ್ಲೆಗೆ ನಮ್ಮ ಯಾತ್ರೆ ತೆರಳಲಿದೆ. ಈ ಹಂತದಲ್ಲಿ 10 ಜಿಲ್ಲೆಗಳಿಗೆ ಭೇಟಿ ಕೊಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲಿ ಉತ್ಸಾಹ ಹೆಚ್ಚಾಗಿದೆ ಮತ್ತು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿಗಳೂ ಗೊಂದಲದಲ್ಲಿದ್ದಾರೆ. ಗ್ಯಾರಂಟಿಗಳ ಭ್ರಮೆಯಲ್ಲಿದ್ದ ಮುಖ್ಯಮಂತ್ರಿಗಳು ವಾಸ್ತವಿಕ ಸತ್ಯವನ್ನು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಮತ್ತು ಸಚಿವರು ಬೆಂಗಳೂರಿಗೆ ಸೀಮಿತವಾಗಿದ್ದಾರೆ ಎಂದು ಮೊದಲ ಹಂತದಲ್ಲೇ ಹೇಳಿದ್ದೆ. ಇದರ ಬಳಿಕ ಮುಖ್ಯಮಂತ್ರಿಗಳು ಎಚ್ಚತ್ತುಕೊಂಡಿದ್ದಾರೆ ಎಂಬ ಭಾವನೆ ನನ್ನದು ಎಂದರು. ಅದಾದ ಬಳಿಕ ಬೆಳಗಾವಿ ಪ್ರವಾಸ, ಬೇರೆ ಬೇರೆ ಜಿಲ್ಲೆಗಳ ಪ್ರವಾಸ ನಿಗದಿಯಾಗಿದೆ. ಜನಾಕ್ರೋಶದ ಬಿಸಿ ರಾಜ್ಯ ಸರಕಾರಕ್ಕೆ ತಟ್ಟಿದೆ ಎಂದು ವಿಶ್ಲೇಷಿಸಿದರು.
ಜಾತಿ ಜನಗಣತಿ ವಿಚಾರದಲ್ಲಿ ಮುಖ್ಯಮಂತ್ರಿಗಳಿಂದ ಸುಳ್ಳು..
ಜಾತಿ ಜನಗಣತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಜಾತಿಗಳ ನಡುವೆ ವಿಷಬೀಜ ಬಿತ್ತಲು ಮುಖ್ಯಮಂತ್ರಿಗಳು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಾತಿ ಜನಗಣತಿ ವಿಚಾರದಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ಅವರು ಟೀಕಿಸಿದರು. ಮುಖ್ಯಮಂತ್ರಿಗಳು ಹುಡುಗಾಟಿಕೆ ಮಾಡುತ್ತಿದ್ದಾರೆಂದು ಬಿಜೆಪಿ ಹಲವಾರು ಸಂದರ್ಭದಲ್ಲಿ ಹೇಳಿದೆ. ಹಿಂದುಳಿದ ಸಮುದಾಗಳು, ಶೋಷಿತ, ಪೀಡಿತ ಸಮುದಾಯಗಳಿಗೆ, ಎಲ್ಲ ಸಮುದಾಯಗಳಿಗೆ ನ್ಯಾಯ ಸಿಗಬೇಕೆಂಬುದು ನಮ್ಮ ಸ್ಪಷ್ಟ ನಿಲುವು ಎಂದರು. ತಮ್ಮ ಕುರ್ಚಿಯ ಅಭದ್ರತೆ ವಿಚಾರ ಬಂದೊಡನೆ ಮುಖ್ಯಮಂತ್ರಿಗಳು ಜಾತಿ ಜನಗಣತಿ ವಿಚಾರವನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಟೀಕಿಸಿದರು.
ಹುಡುಗಾಟಿಕೆ ಮಾಡದಿರಲು ಒತ್ತಾಯ
ಪರೀಕ್ಷೆಗೆ ಹೋಗಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಅವಮಾನ ಮಾಡಿದ್ದಾರೆ. ಇದು ರಾಜ್ಯಾದ್ಯಂತ, ದೇಶಾದ್ಯಂತ ಚರ್ಚೆ ಆಗುತ್ತಿದೆ ಎಂದು ತಿಳಿಸಿದರು. ಈ ವಿಷಯವನ್ನು ಮುಖ್ಯಮಂತ್ರಿಗಳು ಹುಡುಗಾಟಿಕೆ ಮಾಡದೇ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಇದರಿಂದ ಇಡೀ ಸಮುದಾಯ ಬೇಸರಗೊಂಡಿದೆ. ಮುಖ್ಯಮಂತ್ರಿಗಳು ಇದನ್ನು ಹಗುರವಾಗಿ ಪರಿಗಣಿಸಬಾರದು, ಸೂಕ್ತ ನಿರ್ದೇಶನವನ್ನು ನೀಡಬೇಕಿದೆ. ಬೇರೆ ಬೇರೆ ಸಮುದಾಯಗಳು ಜನಿವಾರವನ್ನು ಅಥವಾ ಪವಿತ್ರ ದಾರವನ್ನು ಹಾಕಿಕೊಳ್ಳುತ್ತಾರೆ. ಆ ಎಲ್ಲ ಸಮುದಾಯದ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಮುಖ್ಯಮಂತ್ರಿಗಳು ನಿದೇಶನ ಕೊಡಬೇಕೆಂದು ಆಗ್ರಹಿಸಿದರು.