ನವದೆಹಲಿ : ಪೋಪ್ ಫ್ರಾನ್ಸಿಸ್ ನಿಧನದ ಹಿನ್ನೆಲೆ, ಭಾರತ ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಿದೆ. ಏ.21, 22 ಹಾಗೂ ಪೋಪ್ ಅವರ ಅಂತ್ಯಕ್ರಿಯೆ ನಡೆಯುವ ದಿನ ದೇಶದಾದ್ಯಂತ ಶೋಕಾಚರಣೆ ಜಾರಿಯಲ್ಲಿ ಇರಲಿದೆ ಎಂದು ಸೋಮವಾರ ರಾತ್ರಿ ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
‘ಪೋಪ್ ಅವರ ನಿಧನದ ಗೌರವಾರ್ಥವಾಗಿ, ಭಾರತದಾದ್ಯಂತ ಮೂರು ದಿನಗಳ ಶೋಕಾಚರಣೆಯನ್ನು ಆಚರಿಸಲಾಗುತ್ತದೆ. ನಿಗದಿಯಂತೆ ಏ.21, 22ರಂದು ಹಾಗೂ ಪೋಪ್ ಅವರ ಅಂತ್ಯಸಂಸ್ಕಾರ ನಡೆಯವ ದಿನ ಭಾರತದಲ್ಲಿ ಶೋಕಾಚರಣೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ, ಭಾರತದಾದ್ಯಂತ ತ್ರಿವರ್ಣ ಧ್ವಜವನ್ನು ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು. ಜತೆಗೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ನಡೆಯವುದಿಲ್ಲ’ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಪೋಪ್ ಹುದ್ದೆಗೇರಿದ ಲ್ಯಾಟಿನ್ ಅಮೆರಿಕದ ಮೊದಲ ಧರ್ಮಗುರು ಎಂದು ಪೋಪ್ ಫ್ರಾನ್ಸಿಸ್ (88) ಅವರು ಇತಿಹಾಸ ಸೃಷ್ಟಿಸಿದ್ದಾರೆ. ಅವರು ಸೋಮವಾರ ಬೆಳಿಗ್ಗೆ 7:35 ಕ್ಕೆ ವ್ಯಾಟಿಕನ್ ನಗರದಲ್ಲಿ ಮೃತಪಟ್ಟಿದ್ದಾರೆ.