ಬೆಂಗಳೂರು: ಕನ್ನಡದ ಜನಪ್ರಿಯ ಯುವ ಗಾಯಕಿ ಪೃಥ್ವಿ ಭಟ್ ಅವರ ಪ್ರೇಮ ವಿವಾಹ (Prithvi Bhat Marriage Controversy) ಮತ್ತು ಇದನ್ನು ವಿರೋಧಿಸಿ ಅವರ ಅಪ್ಪ ಬಿಡುಗಡೆ ಮಾಡಿರುವ ಆಡಿಯೊ (Audio message) ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ, ಗಾಯಕಿ ಪೃಥ್ವಿ ಭಟ್ ತಾವೂ ಒಂದು ವಿಡಿಯೊ ಬಿಡುಗಡೆ ಮಾಡಿ ಅಪ್ಪನ ಕ್ಷಮೆ ಕೇಳಿದ್ದಾರೆ. ದಯವಿಟ್ಟು ಕ್ಷಮಿಸಿಬಿಡಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.
ಹಾಯ್ ಅಪ್ಪ, ನನ್ನಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ. ಪ್ಲೀಸ್ ನನ್ನನ್ನು ಕ್ಷಮಿಸಿ. ನಾನು ಮತ್ತು ಅಭಿಷೇಕ್ ಪ್ರೀತಿಸುತ್ತಿದ್ದೆವು. ಈ ವಿಷಯವನ್ನು ಸಂಗೀತ ಗುರು, ಸರಿಗಮಪ ರಿಯಾಲಿಟಿ ಶೋ ಜೂರಿ ನರಹರಿ ದೀಕ್ಷಿತ್ ಅವರು ಮಾರ್ಚ್ 7ರಂದು ನಮ್ಮ ಮನೆಗೆ ಬಂದು ನಿಮಗೆ ವಿಷಯ ಹೇಳಿದ್ದರು. ಆಗಲೂ ನಾನು, ಅಭಿಷೇಕ್‌ರನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದೆ.
ಆದರೆ ಮನೆಯಲ್ಲಿ ನೀವು ಒತ್ತಡ ಹೇರಿದ್ದರಿಂದ ನಾನು ಅವರಿಂದ ದೂರ ಸರಿಯುವುದಾಗಿ ಹೇಳಿದ್ದೆ. ಆದರೆ ನನ್ನ ಮನಸ್ಸಿನಿಂದ ಅಭಿ ದೂರ ಆಗಿರಲಿಲ್ಲ. ಮನೆಯಲ್ಲಿ ನನ್ನ ಮೇಲೆ ಒತ್ತಡ ಹೆಚ್ಚುತ್ತ ಹೋಯಿತು. ಸಂಗೀತ ಕಾರ್ಯಕ್ರಮಕ್ಕೂ ಹೋಗದಂತೆ ಒತ್ತಾಯಿಸಲಾಯಿತು. ಶೋಗೆ ಹೋಗದಂತೆ ನಿರ್ಬಂಧಿಸಲಾಯಿತು. ನೀವೇ ನನ್ನನ್ನು ಎಲ್ಲೆಡೆ ಕರೆದುಕೊಂಡು ಹೋಗಲು ಶುರು ಮಾಡಿದಿರಿ. ಮ್ಯೂಸಿಕ್ಕೇ ಬಿಡು ಅನ್ನುವಲ್ಲಿಯವರೆಗೆ ಹೋಯಿತು. ಹಾಗಾಗಿ ನಾನು ಭಯಗೊಂಡು ಮನೆ ಬಿಟ್ಟು ಹೋದೆ ಮತ್ತು ಅಭಿಷೇಕ್ ರನ್ನು ಮದುವೆಯಾದೆ.
ಅಪ್ಪ ನೀವೀಗ ಹವ್ಯಕರ ಗ್ರೂಪ್ ಗಳಲ್ಲಿ ಮತ್ತು ಬೇರೆ ಬೇರೆ ಗ್ರೂಪ್ ಗಳಲ್ಲಿ ಆಡಿಯೊ ಮೆಸೆಜ್ ಹಾಕಿ ನರಹರಿ ದೀಕ್ಷಿತ್ ಮತ್ತು ನನ್ನ ಬಗ್ಗೆ ಆರೋಪ ಮಾಡಿದ್ದೀರಿ.
ವಾಸ್ತವವಾಗಿ ನರಹರಿ ದೀಕ್ಷಿತರಿಗೂ ನಮ್ಮ ಮದುವೆಗೂ ಯಾವುದೇ ಸಂಬಂಧವಿಲ್ಲ. ಮದುವೆ ಸ್ಥಳಕ್ಕೆ ಬರಲು ನಾನೇ ಅವರಿಗೆ ಹೇಳಿದ್ದೆ. ಹಾಗಾಗಿ ಅವರು ಬಂದು ಆಶೀರ್ವಾದ ಮಾಡಿದರು. ಇದರಲ್ಲಿ ಅವರ ತಪ್ಪು ಏನೂ ಇಲ್ಲ. ನಾನು ಮೊದಲೂ ಹೇಳುತ್ತಿದ್ದೆ. ಈಗಲೂ ಹೇಳುತ್ತೇನೆ. ಅವರದೇನೂ ತಪ್ಪಿಲ್ಲ.
ಅಪ್ಪ, ದೀಕ್ಷಿತ್ ಸರ್ ಮೇಲಿರುವ ದ್ವೇಷ, ಕೋಪ ಎಲ್ಲವನ್ನೂ ಬಿಡಿ ಪ್ಲೀಸ್. ಅವರದೇನೂ ತಪ್ಪಿಲ್ಲ. ಹೌದು, ನಾನು ಮಾಡಿದ್ದು ತಪ್ಪು. ಮದುವೆಯಾದ ಮರುದಿನ ನಾನೇ ನಿಮಗೆ ಸಾರಿ ಅಂತ ಮೆಸೆಜ್ ಮಾಡಿದ್ದೆ. ದಯವಿಟ್ಟು ಕ್ಷಮಿಸಿ ಅಪ್ಪ ಎಂದು ಪೃಥ್ವಿ ಪರಿಪರಿಯಾಗಿ ಕೇಳಿಕೊಂಡಿದ್ದಾರೆ.