ಬೆಂಗಳೂರು : ಇಂದು ಸ್ಮಾರ್ಟ್ ಮೀಟರ್ ಗಳ 15 ಸಾವಿರ ಕೋಟಿ ರೂ. ಹಗರಣದ ವಿರುದ್ಧ ಜನಜಾಗೃತಿ ಹಾಗೂ ಆನ್‍ಲೈನ್ ಮೂಲಕ ಸಹಿ ಅಭಿಯಾನವನ್ನು ಬಿಜೆಪಿ ಇಂದು ಆರಂಭಿಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸರಕಾರದ ಹಗಲುದರೋಡೆಯನ್ನು ಜನತೆಗೆ ತಿಳಿಸಲಿದ್ದೇವೆ. ಸಣ್ಣ ಕೈಗಾರಿಕೆಗಳು, ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ಬಿಲ್ ಕಟ್ಟಲು ಕಷ್ಟವಾಗಿದೆ ಎಂದು ಅವರು ವಿವರಿಸಿದರು.
ಸಿಎಜಿಗೆ, ಪ್ರಿನ್ಸಿಪಲ್ ಆಡಿಟರ್ ಜನರಲ್‍ಗೂ ದೂರು ನೀಡಿದ್ದೇವೆ. ಆದಷ್ಟು ಬೇಗನೆ ತನಿಖೆ ಮಾಡಲು ಕೋರಿದ್ದೇವೆ. ಎಲ್ಲ ದಿಕ್ಕಿನಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಹಗಲು- ರಾತ್ರಿ ಭ್ರಷ್ಟಾಚಾರ ಮಾಡುವವರಿಗೆ ಸ್ಪಷ್ಟ ಸಂದೇಶ ನೀಡುವ ಪ್ರಯತ್ನ ಇದೆಂದು ಹೇಳಿದರು. ಎಲ್ಲ ಸಾರ್ವಜನಿಕರು ಇದಕ್ಕೆ ದೂರು ಕೊಡಬಹುದು ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಬ್ಲ್ಯಾಕ್ ಲಿಸ್ಟ್ ಆದ ಕಂಪೆನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದನ್ನು ಅವರು ಗಮನಕ್ಕೆ ತಂದರು.
ಇಂಧನ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಹಳೆಯ ಗ್ರಾಹಕರಿಗೂ ಇದನ್ನೇ ವಿಸ್ತರಿಸಿದರೆ ಎಲ್ಲರೂ 1.5 ಲಕ್ಷ ಕೊಡಬೇಕಾಗುತ್ತದೆ. 2.5 ಕೋಟಿ ಗ್ರಾಹಕರಿಗೆ ವಿಸ್ತರಿಸಿದರೆ ಎಷ್ಟಿದ್ದೀತು ಭ್ರಷ್ಟಾಚಾರ ಮೊತ್ತ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಗಳ ಹಗರಣದ ವಿಷಯವನ್ನು ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದೇವೆ. ಇದನ್ನು ತಾರ್ಕಿಕ ತುದಿ ಮುಟ್ಟಿಸಲು ಈಗಾಗಲೇ ನಿನ್ನೆ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇವೆ. ಸಮಾಜ ಮತ್ತು ಸರಕಾರದ ಗಮನ ಸೆಳೆದಿದ್ದೇವೆ ಎಂದು ವಿವರಿಸಿದರು.