ಶ್ರೀನಗರ : ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಸಂಭವಿಸಿದೆ.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಎರಡು ದಿನಗಳ ನಂತರ ಈ ಎನ್‌ಕೌಂಟರ್ ದುಡು-ಬಸಂತ್‌ಗಢ ಪ್ರದೇಶದಲ್ಲಿ ನಡೆದಿದೆ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ನೌಕಾಪಡೆಯ ಅಧಿಕಾರಿ, ವಾಯುಪಡೆಯ ಸಿಬ್ಬಂದಿ, ಗುಪ್ತಚರ ಬ್ಯೂರೋದ ಸಿಬ್ಬಂದಿ ಹಾಗೂ ಕರ್ನಾಟಕದ ಮೂವರು ಸೇರಿದಂತೆ 26 ಜನರು ಮೃತಪಟ್ಟಿದ್ದಾರೆ.
ಉಗ್ರರ ದಾಳಿಯ ಬಗ್ಗೆ ಬುಧವಾರ ನಡೆದ ಭದ್ರತೆಯ ಕುರಿತಾದ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪಾಕಿಸ್ತಾನದ ಸಂಪರ್ಕ ಇರುವುದರಿಂದ, ಭಾರತವು ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮಕೈಗೊಂಡಿದೆ. ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ಯಾವುದೇ ಅಸ್ತಿತ್ವದಲ್ಲಿರುವ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಪಾಕ್ ಪ್ರಜೆಗಳಿಗೆ ಸೂಚಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟ್‌ನ್ನು ತಕ್ಷಣದಿಂದ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ತ್ಯಜಿಸುವವರೆಗೆ 1960ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳ್ಳುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದರು. ಇನ್ನು ಪಾಕ್ ಸರ್ಕಾರದ ಎಕ್ಸ್ ಖಾತೆಯನ್ನು ಸಹ ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ.