ನವದೆಹಲಿ :ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾಗಿಯಾದ ಪಾಕ್ ಭಯೋತ್ಪಾದಕರ ಬಂಧನಕ್ಕೆ ನೆರವಾಗುವ ಮಾಹಿತಿ ಕೊಟ್ಟವರಿಗೆ ಪೊಲೀಸರು 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.
ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಮೂವರು ಉಗ್ರರ ರೇಖಾಚಿತ್ರಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶಂಕಿತರಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳೆಂದು ಗುರುತಿಸಲಾಗಿದೆ. ಈ ಉಗ್ರರ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಶಂಕಿತರನ್ನು ಪಾಕಿಸ್ತಾನದ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್, ಅಲಿ ಭಾಯಿ ಅಲಿಯಾಸ್ ತಲ್ಹಾ ಭಾಯಿ ಮತ್ತು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ನಿವಾಸಿ ಅಬ್ದುಲ್ ಹುಸೇನ್ ಥೋಕರ್ ಎಂದು ಗುರುತಿಸಲಾಗಿದೆ. ಮೂವರೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾದ ಸದಸ್ಯರಾಗಿದ್ದಾರೆ.
ಮಂಗಳವಾರ ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸಾವನ್ನಪ್ಪಿದ್ದರು