ಬೆಳಗಾವಿ : ಕಾಡು ಮೇಡಲ್ಲಿ ಸುತ್ತಾಡುತ್ತಾ ಓದಿದ ಕುರಿಗಾಹಿ ಯುಪಿಎಸ್ಇ ಪಾಸ್ ಮಾಡಿ ಅಪ್ರತಿಮ ಸಾಧನೆ ಮಾಡಿದ್ದಾನೆ. ಆತನ ಯಶೋಗಾಥೆ ಇಲ್ಲಿದೆ.
ನಾನಾವಾಡಿಯಲ್ಲಿ ವಾಸವಿರುವ ಈ ಯುವಕನ ಹೆಸರು ಬೀರಪ್ಪ ಸಿದ್ದಪ್ಪ ಡೋಣಿ ಎಂದು. ಮೂಲತಃ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಎಮಗೆ ಗ್ರಾಮದ ಯುವಕ. ಸದ್ಯ ಬೀರಪ್ಪ ದೇಶವೇ ತಿರುಗಿ ನೋಡುವ ಸಾಧನೆಯನ್ನ ಮಾಡಿದ್ದಾನೆ.
ದೇಶದ ಅತ್ಯುನತ್ತ ಪರೀಕ್ಷೆಯಲ್ಲಿ ಒಂದಾದ ನಾಗರೀಕ ಸೇವಾ ಪ್ರಾಧಿಕಾರ ನಡೆಸುವ ಪರೀಕ್ಷೆಯಲ್ಲಿ ಬೀರಪ್ಪ ದೇಶಕ್ಕೆ 551 ನೇ ರ್ಯಾಂಕ್ ಪಡೆದು ತಾನು ಕಲಿತ ಶಾಲೆ ಹಾಗೂ ತನ್ನೂರು ಹಾಗೂ ತನ್ನ ಕುಟುಂಬಕ್ಕೆ ಕೀರ್ತಿ ತಂದಿದ್ದಾನೆ. ಸದ್ಯ ಕುರಿ ಹಿಂಡಿನಲ್ಲಿಯೇ ಇರುವ ಈತ ಮುಂದೆ ದೇಶದಲ್ಲಿ ಐಪಿಎಸ್ ಆಫೀಸರ್ ಆಗಿ ಕೆಲಸ ಮಾಡುವ ಆಸೆ ಹೊಂದಿದ್ದಾನೆ.
ಸಿದ್ದಪ್ಪ ಹಾಗೂ ಬಾಳವ್ವ ದಂಪತಿಯ ಮೂರನೇ ಮಗನಾಗಿ ಜನಿಸಿದ ಬೀರಪ್ಪ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣವನ್ನು ತನ್ನೂರು ಎಮಗೆಯಲ್ಲಿ ಮುಗಿಸಿ ನಂತರ ಪಿಯು ಶಿಕ್ಷಣವನ್ನು ವಿಜ್ಞಾನ ವಿಭಾಗದಲ್ಲಿ ಮುಗಿಸಿ ನಂತರ ಬಿಟೆಕ್ ಪದವಿ ಪಡೆದಿದ್ದಾನೆ.
ಈತನ ಪ್ರತಿಭೆಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಸಿಕ್ಕಿತ್ತು. ಆದರೆ ಅದಕ್ಕೆ ತೃಪ್ತಿ ಹೊಂದದ ಬೀರಪ್ಪ ಅದಕ್ಕೆ ರಾಜೀನಾಮೆ ನೀಡಿ 2021 ರಿಂದ ಓದಲು ಪ್ರಾರಂಭ ಮಾಡಿದ್ದ. ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಆಗಲೇಬೇಕು ಎಂದು ಹಠ ಹಿಡಿದು ಕಡೆಗೆ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ದೇಶಕ್ಕೆ 551 ನೇ ರ್ಯಾಂಕ್ ಪಡೆಯುವುದರ ಮೂಲಕ ತನ್ನ ಕನಸು ನನಸಾಗಿಸಿಕೊಂಡಿದ್ದಾನೆ.
ಬೀರಪ್ಪನ ತಂದೆ ಸಿದ್ದಪ್ಪಗೆ ತಾನೂ ಸೈನ್ಯದಲ್ಲಿ ಕೆಲಸ ಮಾಡಬೇಕು ಎಂಬ ಆಸೆಯಿತ್ತು, ಆದರೆ ಅದು ಕೈಗೂಡಲು ಆಗಲಿಲ್ಲ ಹೀಗಾಗಿ ಸಿದ್ದಪ್ಪನ ಮೊದಲ ಮಗ ಅಂದರೆ ಬೀರಪ್ಪನ ಅಣ್ಣ ತಾನು ಸೈನ್ಯಕ್ಕೆ ಸೇರಿ ತಂದೆಯ ಆಸೆ ಈಡೇರಿಸಿದ್ದಾನೆ. ಸದ್ಯ ಯುಪಿಎಸ್ಸಿಯಲ್ಲಿ ಮೂರನೇ ಪ್ರಯತ್ನಕ್ಕೆ ತೇರ್ಗಡೆ ಹೊಂದಿರುವ ಬೀರಪ್ಪ ಮೊದಲ ಪ್ರಯತ್ನದಲ್ಲಿ ಮೂವತ್ತು ಹಾಗೂ ಎರಡನೇ ಪ್ರಯತ್ನದಲ್ಲಿ ಕೇವಲ ಮೂರು ಅಂಕದಲ್ಲಿ ಹಿಂದೆ ಬಿದ್ದಿದ್ದ. ಕುರಿ ಕಾಯುವವನ ಮಗ ಇಂದು ಐಪಿಎಸ್ ಆಫೀಸರ್ ಆಗ್ತಿರೋದು ಹೆಮ್ಮೆಯ ವಿಚಾರ ಅಂತದ್ದಾರೆ.
ಒಟ್ಟಿನಲ್ಲಿ ಕುರಿಗಾಹಿ ಯುವಕನೋರ್ವ ತನ್ನ ನಿರಂತರ ಶ್ರಮದಿಂದ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಪಾಸಾಗಿದ್ದು ತನ್ನ ಹೆತ್ತವರಿಗೂ ಹಾಗೂ ತನ್ನ ಊರಿಗೂ ಕೀರ್ತಿ ತಂದಿದ್ದಾನೆ.