ಇಸ್ಲಮಾಬಾದ್ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ತನ್ನದೇ ದೇಶದ ಕೈವಾಡವಿದೆ ಎಂದು ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಆರೋಪಿಸಿದ್ದಾರೆ.
ಈ ಭಯೋತ್ಪಾದಕ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ದಾನಿಶ್ ಕನೇರಿಯಾ ಅವರು, ಪಾಕಿಸ್ತಾನ್ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದರೆ, ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದರೆ ನಾಚಿಕೆಪಡಬೇಕು. ಇಂತಹ ಕೃತ್ಯಗಳ ಬಗ್ಗೆ ಜಾಣಮೌನವಹಿಸುವ ಪಾಕಿಸ್ತಾನಕ್ಕೆ ನಾಚಿಕೆಯಾಗಬೇಕು ಎಂದಿದ್ದಾರೆ.
ಪಹಲ್ಗಾಮ್ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ಈ ದಾಳಿಯಲ್ಲಿ ನಿಜವಾಗಿಯೂ ಪಾಕಿಸ್ತಾನದ ಯಾವುದೇ ಕೈವಾಡವಿಲ್ಲದಿದ್ದರೆ, ನಮ್ಮ ಪ್ರಧಾನಿ ಶಹಬಾಜ್ ಷರೀಫ್ ಆ ವಿಷಯದ ಬಗ್ಗೆ ಏಕೆ ಕಳವಳ ವ್ಯಕ್ತಪಡಿಸಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.
ಅತ್ತ ಭಾರತದಲ್ಲಿ ದಾಳಿಯಾಗುತ್ತಿದ್ದಂತೆ ಇತ್ತ ಪಾಕಿಸ್ತಾನದಲ್ಲಿ ಸೇನೆಗೆ ಇದ್ದಕ್ಕಿದ್ದಂತೆ ಹೆಚ್ಚಿನ ಎಚ್ಚರಿಕೆ ವಹಿಸಲು ಏಕೆ ಹೇಳಲಾಯಿತು? ಏಕೆಂದರೆ ನಿಮಗೆ ಸತ್ಯ ಗೊತ್ತಿದೆ. ನೀವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ ಮತ್ತು ಪೋಷಿಸುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ಪಾಕಿಸ್ತಾನ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.