ಕೇರಳ : ಆಲಪ್ಪುಳ ಜಿಲ್ಲೆಯ ಮಾಳವಿಕಾಗೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹೆರಿಗೆಯಾಗಿತ್ತು. ಆದರೆ ಹೆರಿಗೆಯಾದ ಕೇವಲ 17 ದಿನಗಳ ನಂತರ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು, 45 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಗರ್ಭಧಾರಣೆ ಮತ್ತು ಹೆರಿಗೆಯ ಸವಾಲುಗಳ ಹೊರತಾಗಿಯೂ ತಮ್ಮ ಕನಸನ್ನು ಸಾಧಿಸುವ ಮೂಲಕ ಸಾಕಷ್ಟು ಮಹಿಳೆಯರಿಗೆ ಇವರು ಮಾದರಿಯಾಗಿದ್ದಾರೆ.
ಬಾಣಂತನವೆಂಬುದು ಹೆಣ್ಣಿನ ಜೀವನದ ಬಹಳ ಸೂಕ್ಷ್ಮ ಘಟ್ಟ. ಈ ಸಮಯದಲ್ಲಿ ಆಕೆಗೆ ದೈಹಿಕ ಹಾಗೂ ಮಾನಸಿಕವಾಗಿ ವಿಶ್ರಾಂತಿ ಬೇಕಿರುತ್ತದೆ. ಮಗುವಿನ ಆರೋಗ್ಯದ ಚಿಂತೆ ಒಂದೆಡೆಯಾದರೆ ದೈಹಿಕವಾಗಿ ಆಗುವ ಬದಲಾವಣೆಗಳಿಗೆ ಒಗ್ಗಿಕೊಂಡು ಮಾನಸಿಕ ಸ್ಥಿತಿಯನ್ನೂ ಸಮತೋಲನದಲ್ಲಿರಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ ಬಾಣಂತನದ ಸಮಯದಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುವ ಬದಲಾಗಿ ದೇಶದಲ್ಲೇ ತುಂಬಾ ಕಷ್ಟವಾದ ಯುಪಿಎಸ್ಸಿ ಪರೀಕ್ಷೆ ಬರೆದಿದ್ದಾಳೆ. ಈ ಮೂಲಕ ತನ್ನ ಆರನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ
2024 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪ್ 50 ರ್ಯಾಂಕ್ ಪಡೆದವರಲ್ಲಿ ಸ್ಥಾನ ಪಡೆದ ಕೇರಳದ ಮೂವರು ನಾಗರಿಕ ಸೇವಾ ಅಭ್ಯರ್ಥಿಗಳಲ್ಲಿ ಒಬ್ಬರಾದ ಮಾಳವಿಕಾ ಜಿ ನಾಯರ್ ಸದ್ಯ ಎಲ್ಲೆಡೆ ಸುದ್ದಿಯಲ್ಲಿದ್ದಾರೆ.
ನನ್ನ ಹೆಸರು ರ್ಯಾಂಕ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ, ದೇವರಿಗೆ ಧನ್ಯವಾದಗಳು. ಐಎಎಸ್ಗೆ ಪ್ರವೇಶಿಸಲು ಇದು ನನ್ನ ಕೊನೆಯ ಪ್ರಯತ್ನವಾಗಿತ್ತು. ಕಳೆದ ವರ್ಷ ಪ್ರಿಲಿಮ್ಸ್ ಪರೀಕ್ಷೆ ಬರೆಯುವಾಗ ನಾನು ಗರ್ಭಿಣಿಯಾಗಿದ್ದೆ. ಆರೋಗ್ಯದ ವಿಷಯದಲ್ಲಿ ಸವಾಲುಗಳಿದ್ದವು. ನನ್ನ ಮಗ ಸೆಪ್ಟೆಂಬರ್ 3 ರಂದು ಜನಿಸಿದನು ಮತ್ತು ನಾನು ಸೆಪ್ಟೆಂಬರ್ 20 ರಂದು ಮುಖ್ಯ ಪರೀಕ್ಷೆ ಬರೆದೆ. ನನ್ನ ಕುಟುಂಬವು ನನಗೆ ನೀಡಿದ ಬೆಂಬಲದಿಂದಾಗಿ ನಾನು ಪರೀಕ್ಷೆಯನ್ನು ಬರೆಯಲು ಸಾಧ್ಯವಾಯಿತು,” ಎಂದು ಮಾಳವಿಕಾ ಮಾಧ್ಯಮದ ಮುಂದೆ ಹೇಳಿದ್ದಾರೆ.
45 ನೇ ರ್ಯಾಂಕ್ ಗಳಿಸಿರುವ ನಾಯರ್ ಪ್ರಸ್ತುತ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯಾಗಿದ್ದಾರೆ. ಡೆಪ್ಯೂಟಿ ಕಮಿಷನರ್ ಶ್ರೇಣಿಯ ಅಧಿಕಾರಿಯಾಗಿರುವ ನಾಯರ್ ಪ್ರಸ್ತುತ ಮಕ್ಕಳ ಆರೈಕೆ ರಜೆಯಲ್ಲಿದ್ದಾರೆ. ಅವರು ಈ ಹಿಂದೆ ಎರಡು ಬಾರಿ ಯುಪಿಎಸ್ಸಿ ರ್ಯಾಂಕ್ ಪಟ್ಟಿಯನ್ನು ಪಾಸು ಮಾಡಿದ್ದಾರೆ ಮತ್ತು 2022 ರ ಪರೀಕ್ಷೆಯಲ್ಲಿ 172 ನೇ ರ್ಯಾಂಕ್ ಗಳಿಸಿದಾಗ ಅವರಿಗೆ ಐಆರ್ಎಸ್ ಹಂಚಿಕೆಯಾಗಿತ್ತು. ಅವರ ಪತಿ ನಂದಗೋಪನ್ ಎಂ, 2023 ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿ ತರಬೇತಿದಾರರಾಗಿದ್ದು, ಪ್ರಸ್ತುತ ಮಲಪ್ಪುರಂ ಜಿಲ್ಲೆಯ ಮಂಜೇರಿ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿದ್ದಾರೆ.