ಬಲೂಚಿಸ್ತಾನ್ : ಶುಕ್ರವಾರ ಕ್ವೆಟ್ಟಾದಲ್ಲಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನಡೆಸಿದ ಐಇಡಿ ದಾಳಿಯಲ್ಲಿ ಹತ್ತು ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಬಲೂಚಿಸ್ತಾನ್ ರಾಜಧಾನಿಯ ಹೊರವಲಯದಲ್ಲಿರುವ ಮಾರ್ಗತ್ ಪ್ರದೇಶದಲ್ಲಿ ಸೇನಾ ಬೆಂಗಾವಲು ಪಡೆಗಳನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಬಲೂಚ್ ದಂಗೆಕೋರರಿಂದ ಕೊಲ್ಲಲ್ಪಟ್ಟ ಸಿಬ್ಬಂದಿಗಳಲ್ಲಿ ಸುಬೇದಾರ್ ಶೆಹಜಾದ್ ಅಮೀನ್, ನಯಬ್ ಸುಬೇದಾರ್ ಅಬ್ಬಾಸ್, ಸಿಪಾಯಿ ಖಲೀಲ್, ಸಿಪಾಯಿ ಜಾಹಿದ್, ಸಿಪಾಯಿ ಖುರ್ರಂ ಮತ್ತು ಇತರರು ಸೇರಿದ್ದಾರೆ. ಇದು ಅವರಿಗೆ ಕೇವಲ ಎಚ್ಚರಿಕೆ ಅಷ್ಟೇ, ಮುಂದಿನ ದಿನಗಳಲ್ಲಿ ಈ ಕಾರ್ಯಚರಣೆ ಇನ್ನು ತೀವ್ರವಾಗಿರುತ್ತದೆ. ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಏನು ಬೇಕಾದರೂ ಮಾಡುತ್ತೇವೆ ಎಂದು ಪಾಕ್ಗೆ ಎಚ್ಚರಿಕೆ ನೀಡಿದ್ದಾರೆ.
ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ವಿರುದ್ಧ ಇಂತಹ ಅನೇಕ ದಾಳಿಗಳು ನಡೆದಿದೆ. ಇನ್ನು ಈ ದಾಳಿಗೂ ಮುನ್ನ ಗುರುವಾರ ಪಾಕ್ ಸೇನೆಯ ಜತೆಗೆ ಬಿಎಲ್‌ಎ ಪಡೆ ಗುಂಡಿನ ಚಕಮಕಿ ನಡೆಸಿದೆ. ಇದರಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.