ಬೆಂಗಳೂರು: ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಯುಜಿ ಸಿಇಟಿಯಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಒಂದು ಕೃಪಾಂಕ ನೀಡುವುದಾಗಿ ಘೋಷಿಸಿದೆ.
ಇದರೊಂದಿಗೆ ಕೆಲವು ಉತ್ತರಗಳಿಗೆ ಬದಲಾವಣೆ ಹಾಗೂ ಪರ್ಯಾಯ ಉತ್ತರಗಳನ್ನು ನೀಡಲಾಗಿದೆ. ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏಪ್ರಿಲ್ 15ರಿಂದ 17ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿದ್ದು, ಏಪ್ರಿಲ್ 18ರಂದು ಸರಿ ಉತ್ತರಗಳನ್ನು ಬಿಡುಗಡೆ ಮಾಡಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು.
ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಗಣಿಸಿ ಪರಿಷ್ಕೃತ ಸರಿ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ಸರಿ ಉತ್ತರಗಳ ಪ್ರಕಾರ ಭೌತಶಾಸ್ತ್ರ ವಿಷಯದಲ್ಲಿ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದೆ. ಒಂದು ಉತ್ತರ ಬದಲಾವಣೆ ಮಾಡಲಾಗಿದೆ. ರಸಾಯನ ಶಾಸ್ತ್ರದಲ್ಲಿ ಎರಡು ಉತ್ತರಗಳಿಗೆ ಪರ್ಯಾಯ ಉತ್ತರಗಳನ್ನು ಸೂಚಿಸಲಾಗಿದೆ. ಜೀವಶಾಸ್ತ್ರ ಪತ್ರಿಕೆಯಲ್ಲಿ ಒಂದು ಪ್ರಶ್ನೆಗೆ ಪರ್ಯಾಯ ಉತ್ತರ ನೀಡಲಾಗಿದೆ. ಉಳಿದಂತೆ ಗಣಿತ ಪತ್ರಿಕೆ ಯಾವುದೇ ಉತ್ತರದಲ್ಲಿ ಬದಲಾವಣೆ ಮಾಡಿಲ್ಲ .