ಮೊರಿಂಗಾ ಎಂದೇ ಕರೆಯಲ್ಪಡುವ ನುಗ್ಗೆ ಸೊಪ್ಪು ತನ್ನ ಆರೋಗ್ಯಕರ ಪ್ರಯೋಜನಗಳ ಮೂಲಕ ಬಹಳಷ್ಟು ಪ್ರಸಿದ್ಧಿಯಲ್ಲಿದೆ. ಅದರಲ್ಲೂ ಕೂದಲಿನ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳು ಈ ಸೊಪ್ಪಿನಲ್ಲಿದ್ದು, ಪ್ರೋಟೀನ್, ಜೀವಸತ್ವಗಳು, ಬೀಟಾ-ಕ್ಯಾರೋಟಿನ್, ಅಮೈನೋ ಆಮ್ಲಗಳು ಮತ್ತು ವಿವಿಧ ಫೀನಾಲಿಕ್‌ಗಳ ಉತ್ತಮ ಮೂಲವಾಗಿದೆ. ಅಲ್ಲದೆ ನುಗ್ಗೆ ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಸತು, ವಿಟಮಿನ್ ಎ ಮತ್ತು ಕಬ್ಬಿಣವಿದೆ. ಇದು ಕೂದಲಿನ ಬೆಳವಣಿಗೆಗೆ ಬಹಳ ಆವಶ್ಯಕ (Hair Care). ಹೀಗಾಗಿ ಕೂದಲಿನ ಪೋಷಣೆಗಾಗಿ ನುಗ್ಗೆ ಸೊಪ್ಪು ಬಹಳಷ್ಟು ಸಹಕಾರಿ. ನುಗ್ಗೆ ಸೊಪ್ಪಿನ ಹೇರ್ ಮಾಸ್ಕ್ ಅಥವಾ ಎಣ್ಣೆಯನ್ನು ಹಚ್ಚುವ ಮೂಲಕ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.
ಜೀವಸತ್ವಗಳು
ಮೊರಿಂಗಾವು ಪ್ರಮುಖ ಪೋಷಕಾಂಶಗಳನ್ನು ಹೊಂದಿದ್ದು ಕೂದಲಿನ ಬೆಳವಣಿಗೆಗೆ ಮತ್ತು ಆರೋಗ್ಯಕರ ಕೂದಲು ಪಡೆಯಲು ಹೆಚ್ಚು ಸಹಾಯಕಾರಿ. ಮೊದಲೇ ಹೇಳಿದಂತೆ ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಮತ್ತು ಬಿ6 ಮತ್ತು ಬಯೋಟಿನ್‌ನಂತಹ ವಿವಿಧ ಪೋಷಕಾಂಶಗಳಿವೆ. ಅಲ್ಲದೆ ಇದರಲ್ಲಿನ ವಿಟಮಿನ್ ಎ ನಿಮ್ಮ ಕೂದಲಿನ ಕಿರುಚೀಲಗಳಿಗೆ ಹೆಚ್ಚಿನ ಪೋಷಣೆ ನೀಡಲಿದೆ. ಹೀಗಾಗಿ ಇದು ನಿಮ್ಮ ಕೂದಲಿನ ಬೆಳವಣಿಗೆಗೆ ಸಹಾಯಕಾರಿ.
ಉತ್ಕರ್ಷಣ ನಿರೋಧಕಗಳು
ಮೊರಿಂಗಾವು ಸತು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂನಂತಹ ಖನಿಜಗಳನ್ನು ಹೊಂದಿದೆ. ಈ ಸತುವು ಕೂದಲಿನ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅದೇ ರೀತಿ ಮೊರಿಂಗಾದಲ್ಲಿ ಕ್ಲೋರೊಜೆನಿಕ್ ಆಮ್ಲ ಮತ್ತು ಬೀಟಾ-ಕ್ಯಾರೋಟಿನ್‌ನಂತಹ ಕೆಲವು ಉತ್ಕರ್ಷಣ ನಿರೋಧಕಗಳ ಅಂಶ ಇದ್ದು, ಇದು ಆಕ್ಸಿಡೇಟಿವ್ ಒತ್ತಡ ಮತ್ತು ಕೂದಲು ಉದುರುವಿಕೆಗೆ ಮುಕ್ತ ರಾಡಿಕಲ್ ಆಗಿ ಕೆಲಸ ಮಾಡುತ್ತದೆ. ಇದರಿಂದ ಕೂದಲಿನ ನೆತ್ತಿಯ ಆರೋಗ್ಯ ಕಾಪಾಡುತ್ತದೆ ಮತ್ತು ಕೂದಲಿನ ಹಾನಿಯಿಂದ ರಕ್ಷಿಸುತ್ತದೆ.
ಪ್ರೋಟೀನ್ ಮತ್ತು ಅಮೈನೋ ಆಮ್ಲಗಳು
ಮೊರಿಂಗಾವು ಕೆರಾಟಿನ್ ಉತ್ಪಾದನೆಗೆ ಅಗತ್ಯವಾದ ಎಲ್ಲ ಅಮೈನೋ ಆಮ್ಲಗಳನ್ನು ಹೊಂದಿದೆ. ಇದು ಕೂದಲಿನ ರಚನೆಯನ್ನು ವೃದ್ಧಿಸಿ ಆರೋಗ್ಯವಂತ ಕೂದಲನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಮೊರಿಂಗಾ ಲ್ಲಿರುವ ಈ ಅಂಶಗಳು ಕೂದಲನ್ನು ಬಲಗೊಳಿಸಲು ಹಾಗೂ ಕೂದಲು ತೆಳುವಾಗುವುದನ್ನು ತಡೆಯಲು ಸಹಾಯಕ.
ಹೇಗೆ ಬಳಸಬಹುದು?
ಮೊರಿಂಗಾ ಪುಡಿ: ಮೊರಿಂಗಾ ಪುಡಿಯನ್ನು ಸೇವಿಸಬಹುದು. ಇದಕ್ಕಾಗಿ ಮೊರಿಂಗಾ ಪುಡಿಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಬಹುದು. ಇದನ್ನು ಬಾಳೆಹಣ್ಣು, ಮಾವಿನ ಹಣ್ಣು, ಪಾಲಕ್ ನಂತಹ ಹಸಿರು ತರಕಾರಿಗಳೊಂದಿಗೆ ಬೆರೆಸಬಹುದು. ಇದು ನಿಮ್ಮ ಕೂದಲು ಮತ್ತು ಸಾಮಾನ್ಯ ಆರೋಗ್ಯಕ್ಕೆ ಉತ್ತಮವಾದ ಪೌಷ್ಟಿಕಾಂಶಯುತ ಆಹಾರವಾಗಿದೆ.
ಮೊರಿಂಗಾ ಟೀ: ಮೊರಿಂಗಾವನ್ನು ಆಹಾರದಲ್ಲಿ ಸೇರಿಸಲು ಮತ್ತೊಂದು ಸುಲಭ ಮಾರ್ಗವೆಂದರೆ ಅದನ್ನು ಚಹಾದಂತೆ ಸೇವಿಸುವುದು. ಒಂದು ಟೀ ಚಮಚ ಮೊರಿಂಗಾ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಇದನ್ನು ನಿಂಬೆ ಅಥವಾ ಜೇನುತುಪ್ಪ ಸೇರಿಸಿ ಕುಡಿಯಬಹುದು.
ನೀರು ಅಥವಾ ಜ್ಯೂಸ್ ನೊಂದಿಗೆ ಮಿಶ್ರಣ ಮಾಡಿ: ನಿಮಗೆ ಸ್ಮೂಥಿ ಅಥವಾ ಚಹಾ ಇಷ್ಟವಿಲ್ಲದಿದ್ದರೆ ಮೊರಿಂಗಾ ಪುಡಿಯನ್ನು ನೇರವಾಗಿ ನೀರು ಅಥವಾ ಹಣ್ಣಿನ ರಸದೊಂದಿಗೆ ಬೆರೆಸಬಹುದು. ಒಂದು ಟೀ ಚಮಚ ಪುಡಿಯನ್ನು ನೀರು ಅಥವಾ ಜ್ಯೂಸ್‌ಗೆ ಬೆರೆಸಿ ಮತ್ತು ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿದರೆ ಆರೋಗ್ಯ ರಕ್ಷಣೆ ಜತೆ ಕೂದಲಿನ ಆರೋಗ್ಯವು ಉತ್ತಮವಾಗುತ್ತದೆ.
ಮೊರಿಂಗಾ ಕ್ಯಾಪ್ಸುಲ್: ಮೊರಿಂಗಾದ ಬಳಕೆ ಹೆಚ್ಚಿಸಲು ನೀವು ಕ್ಯಾಪ್ಸುಲ್ ಸೇವಿಸಬಹುದು. ಸಾಮಾನ್ಯವಾಗಿ ಮೊರಿಂಗಾದ ಪುಡಿಯನ್ನು ಕ್ಯಾಪ್ಸುಲ್ ರೂಪದಲ್ಲಿ ಇರಿಸಲಾಗುತ್ತದೆ. ಹಾಗಾಗಿ ತಜ್ಞರ ಸಲಹೆ ಮೇರೆಗೆ ಸೂಚಿಸಲಾದ ಅಥವಾ ನಿಮ್ಮ ಆರೋಗ್ಯ ರಕ್ಷಣೆಗೆ ಸೂಚಿಸಿದ ಕ್ಯಾಪ್ಸುಲ್ ಬಳಕೆ ಮಾಡಿ.
ಕೂದಲಿನ ಬೆಳವಣಿಗೆಗೆ ಮೊರಿಂಗಾ ಎಣ್ಣೆ: ಮೊರಿಂಗಾ ಎಣ್ಣೆಯನ್ನು ಮೊರಿಂಗಾ ಬೀಜಗಳಿಂದ ತಯಾರಿಸಲಾಗುತ್ತದೆ. ಉತ್ಕರ್ಷಣ ನಿರೋಧಕಗಳು, ವಿಟಮಿನ್‌ಗಳು ಮತ್ತು ಕೊಬ್ಬಿನಾಮ್ಲಗಳಿಂದ ತುಂಬಿರುವ ಇದು ನಿಮ್ಮ ನೆತ್ತಿಯನ್ನು ತಂಪಾಗಿಸಲು, ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು ಅತ್ಯುತ್ತಮ.
ನೆತ್ತಿಯ ಮಸಾಜ್: ಸ್ವಲ್ಪ ಪ್ರಮಾಣದ ಮೊರಿಂಗಾ ಎಣ್ಣೆಯನ್ನು ಬೆಚ್ಚಗಾಗಿಸಿ ಮತ್ತು ಸುಮಾರು 10-15 ನಿಮಿಷಗಳ ಕಾಲ ನಿಮ್ಮ ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ಇದು ಕೂದಲು ಕಿರುಚೀಲಗಳ ರಕ್ತ ಪರಿಚಲನೆಯನ್ನು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನಿಮ್ಮ ನೆತ್ತಿಯ ಮೇಲೆ ರಾತ್ರಿಯಿಡೀ ಹಾಗೆ ಬಿಡಿ. ನಂತರ ಶಾಂಪೂ ಬಳಸಿ ಕೂದಲು ತೊಳೆಯಿರಿ.
ಹೇರ್ ಮಾಸ್ಕ್: ತೆಂಗಿನ ಎಣ್ಣೆ ಅಥವಾ ಅರ್ಗಾನ್ ಎಣ್ಣೆಯನ್ನು ಮೊರಿಂಗಾ ಎಣ್ಣೆಯೊಂದಿಗೆ ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಇದನ್ನು ನೆತ್ತಿ ಮತ್ತು ಕೂದಲಿನ ತುದಿಗಳಿಗೆ ಹಚ್ಚಿ ಸುಮಾರು 30 ನಿಮಿಷಗಳ ತೊಳೆಯಿರಿ. ಕೂದಲಿನ ಶಕ್ತಿ, ಹೊಳಪು ಹೆಚ್ಚಿಸಲು ಮತ್ತು ಕೂದಲು ಒಡೆಯುವುದನ್ನು ತಡೆಯಲು ಇದು ಸೂಕ್ತ.
ಅಲೋವೆರಾದೊಂದಿಗೆ ಬೆರೆಸಿ: ಅಲೋವೆರಾ ಜೆಲ್ ಜತೆಗೆ ಮೊರಿಂಗಾವನ್ನು ಬೆರೆಸಿ ಕೂದಲಿಗೆ ಹಚ್ಚಿ. ಅಲೋವೆರಾ ಜೆಲ್ ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದ್ದು ಇದು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತಲೆಹೊಟ್ಟು ನಿಯಂತ್ರಿಸುತ್ತದೆ. ಹಾಗಾಗಿ ಮೊರಿಂಗಾ ಪುಡಿಯನ್ನು ಅಲೋವೆರಾ ಜೆಲ್‌ನೊಂದಿಗೆ ಮಿಶ್ರಣ ಮಾಡಿ, ನೆತ್ತಿ ಮತ್ತು ನೆತ್ತಿಯ ಕೂದಲಿಗೆ ಅನ್ವಯಿಸಿ. 20-30 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.