ಹೈದರಾಬಾದ್: ಆಂಧ್ರ ಪ್ರದೇಶದ ವಿಶಾಖಪಟ್ಟಣದ ಸಿಂಹಾಚಲಂನಲ್ಲಿರುವ ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದ ಗೋಡೆ ಕುಸಿದು ಎಂಟು ಜನರು ಸಾವನ್ನಪ್ಪಿರುವ ಘಟನೆ ಬುಧವಾರ ಮುಂಜಾನೆ ವೇಳೆ ಸಂಭವಿಸಿದೆ.
ದೇವಸ್ಥಾನದಲ್ಲಿ ನಡೆಯುತ್ತಿದ್ದ ಚಂದನೋತ್ಸವಂ ವೇಳೆ ಈ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಚಂದನೋತ್ಸವದಲ್ಲಿ ವರಾಹ ಲಕ್ಷ್ಮೀ ನರಸಿಂಹಸ್ವಾಮಿಯ ನಿಜರೂಪ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಇದೇ ವೇಳೆ ದೇವಸ್ಥಾನದಲ್ಲಿ ಇತ್ತೀಚಿಗೆ ನಿರ್ಮಿಸಲಾಗಿದ್ದ 20 ಅಡಿ ಉದ್ದದ ಹೊಸ ಗೋಡೆಯೊಂದು ಕುಸಿದಿದೆ. ಪರಿಣಾಮ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಸ್ಥಳಕ್ಕೆ ತಕ್ಷಣವೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲಾಗಿದ್ದು, ಗಾಯಾಳುಗಳನ್ನು ಕಿಂಗ್ಜಾರ್ಜ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇಂದು ಮುಂಜಾನೆ 2.30ರಿಂದ 3.30ರವರೆಗೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಭಾರಿ ಗಾಳಿ ಹಾಗೂ ದೇವಸ್ಥಾನದ ಬಳಿ ಹರಿಯುತ್ತಿದ್ದ ನೀರಿನ ಹರಿವು ಈ ಘಟನೆಗೆ ಕಾರಣ ಎನ್ನಲಾಗಿದೆ. ಗೋಡೆಯು ಮಣ್ಣಿನ ಹೊದಿಕೆಯನ್ನು ಹೊಂದಿದ್ದು, ಮಣ್ಣು ಸಡಿಲಗೊಂಡಿತ್ತು ಎನ್ನಲಾಗಿದೆ. ಭಾರಿ ಗಾಳಿಯಿಂದಾಗಿ ಪೆಂಡಾಲ್ಗಳು ನೆಲಕ್ಕುರುಳಿದವು. 20 ದಿನಗಳ ಹಿಂದೆಯಷ್ಟೇ ಈ ಗೋಡೆಯನ್ನು ನಿರ್ಮಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.