ಕೋಲ್ಕತ್ತಾ: ಏ. 22 ರಂದು ಜಮ್ಮು ಮತ್ತು ಕಾಶ್ಮೀರ ಪಹಾಲ್ಗಮ್ನಲ್ಲಿ (Pahalgam Attack) ನಡೆದ ಉಗ್ರರ ದಾಳಿಯಲ್ಲಿ 26 ಭಾರತೀಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದರ ಪ್ರತೀಕಾರವಾಗಿ ಭಾರತೀಯ ಸೇನೆ ಉಗ್ರರ ಮನೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸುತ್ತಿದೆ. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿರುವ ಭಾರತೀಯ ಸೇನಾ ವಿಶೇಷ ಪಡೆ (ಎಸ್ಎಫ್) ಕಮಾಂಡೋ (Army Special Forces Commando) ಒಬ್ಬರಿಗೆ ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ ಜೀವ ಬೆದರಿಕೆ ಬಂದಿದೆ ಎಂದು ತಿಳಿದು ಬಂದಿದೆ. ಭಾರತೀಯ ಸೇನೆಯ ಪ್ಯಾರಾ ಕಮಾಂಡೋ ಅವರ ಪಶ್ಚಿಮ ಬಂಗಾಳ ನಿವಾಸದ ಹೊರಗೆ “ಗೌರವ್ ಅವರ ತಲೆ ಬೇಕು ಮತ್ತು “ಪಾಕಿಸ್ತಾನ್ ಜಿಂದಾಬಾದ್” ನಂತಹ ಸಂದೇಶಗಳನ್ನು ಹೊಂದಿರುವ ಕೈಬರಹದ ಟಿಪ್ಪಣಿಯೊಂದಿಗೆ ಬೆದರಿಕೆ ಪೋಸ್ಟರ್ ಕಂಡುಬಂದಿದೆ.
ಹೂಗ್ಲಿ ಜಿಲ್ಲೆಯ ಧನಿಯಾಖಾಲಿ ಗ್ರಾಮದಲ್ಲಿರುವ ಸೇನಾ ಯೋಧ ಗೌರವ್ ಮುಖರ್ಜಿ ಅವರ ಮನೆಯ ಬಳಿ ಶನಿವಾರ ರಾತ್ರಿ ಈ ಬೆದರಿಕೆ ಪತ್ರ ಪತ್ತೆಯಾಗಿದೆ. ರಾಕೇಶ್ ಮುಖರ್ಜಿ ಅಲಿಯಾಸ್ ಗೌರಬ್ ಎಂಬ ಸೈನಿಕ, 2022 ರ ಡಿಸೆಂಬರ್ 26 ರಂದು ಅಗ್ನಿವೀರ್ ನೇಮಕಾತಿ ಯೋಜನೆಯ ಮೂಲಕ ಸೇನೆಗೆ ಸೇರಿದ್ದರು. ಪಾಕಿಸ್ತಾನ್ ಜಿಂದಾಬಾದ್. ನಮಗೆ ಗೌರವ್ ತಲೆ ಬೇಕು. ನೀವು ಹಿಂದೂಗಳನ್ನು ಉಳಿಸಿದರೆ ನಾವು ನಿಮ್ಮ ಕುಟುಂಬವನ್ನು ಮುಗಿಸುತ್ತೇವೆ. ನಾವು ಬಂಗಾಳವನ್ನು ಬಾಂಗ್ಲಾದೇಶವನ್ನಾಗಿ ಮಾಡುತ್ತೇವೆ” ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ. ಧನಿಯಾಖಾಲಿಯಲ್ಲಿ ವಾಸಿಸುವ ಅವರ ಕುಟುಂಬವು ತಮ್ಮ ಮನೆಯ ಹೊರಗೆ ಪೋಸ್ಟರ್ ಅನ್ನು ಕಂಡುಹಿಡಿದಿದೆ ಮತ್ತು ತಕ್ಷಣ ಸ್ಥಳೀಯ ಪೊಲೀಸರಿಗೆ ದೂರು ನೀಡಿದೆ.
ಎರಡೂ ಪೋಸ್ಟರ್ಗಳ ಕೆಳಗೆ ‘ಅಲ್ ಖೈದಾ ಮುಸ್ಲಿಂ ಲೀಗ್’ ಎಂದು ಬರೆಯಲಾಗಿತ್ತು. ಪಶ್ಚಿಮ ಬಂಗಾಳ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಏತನ್ಮಧ್ಯೆ, ಪೋಸ್ಟರ್ ಹಾಕಲಾಗಿದೆ ಎಂದು ಹೇಳಲಾದ ಸಮಯದಲ್ಲಿ ಮನೆಯ ಬಳಿ ಎರಡು ಸ್ಕೂಟರ್ಗಳಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ ಎಂದು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸಿದೆ. ಸದ್ಯ ಪೊಲೀಸರು ಗೌರವ್ ಅವರ ಮನೆ ಬಳಿ ಗಸ್ತು ತಿರುಗುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಪತ್ತೆಗೆ ತನಿಖೆ ಚುರುಕುಗೊಂಡಿದೆ. ಈ ವರೆಗೆ 10 ಕ್ಕೂ ಹೆಚ್ಚು ಉಗ್ರರ ಮನೆಗಳನ್ನು ಸೇನೆ ಧ್ವಂಸಗೊಳಿಸಿದೆ. ಪಹಲ್ಗಮ್ನಲ್ಲಿ ಎನ್ಐಎ ಅಧಿಕಾರಿಗಳು ಬೀಡುಬಿಟ್ಟಿದ್ದು, ಸುತ್ತಲಿನ ಪ್ರದೇಶವನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಉಗ್ರರ ಕೆಲ ಮಾಹಿತಿಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಅಧಿಕಾರಿಗಳು ಉಗ್ರ ಹಾಶಿಮ್ ಮೂಸಾನ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಈತ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದ ಎನ್ನಲಾಗಿದೆ. ಈತ ಪಾಕಿಸ್ತಾನಿ ಸೇನೆಯ ಮಾಜಿ ಕಮಾಂಡರ್ ಎಂದು ತಿಳಿದು ಬಂದಿದೆ.