ಕೇರಳ: ಭಾರತದ ಮಾಜಿ ಶೂಟಿಂಗ್ ತರಬೇತುದಾರ ಸನ್ನಿ ಥಾಮಸ್ ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು ಅವರು ನೆಲೆಸಿದ್ದ ಕೊಟ್ಟಾಯಂನಲ್ಲಿ ಕೊನೆಯುಸಿರೆಳೆದರು. ಥಾಮಸ್ ಅವರ ಪತ್ನಿ ಕೆಜೆ ಜೋಸಮ್ಮ, ಪುತ್ರರಾದ ಮನೋಜ್ ಸನ್ನಿ, ಸನಿಲ್ ಸನ್ನಿ ಮತ್ತು ಪುತ್ರಿ ಸೋನಿಯಾ ಸನ್ನಿ ಅವರನ್ನು ಅಗಲಿದ್ದಾರೆ.
ಕ್ರೀಡೆಯ ಮೇಲೆ ಪರಿವರ್ತನಾತ್ಮಕ ಪ್ರಭಾವಕ್ಕೆ ಹೆಸರುವಾಸಿಯಾದ ಅವರು, ಜಾಗತಿಕ ವೇದಿಕೆಯಲ್ಲಿ ಭಾರತೀಯ ಶೂಟಿಂಗ್‌ನ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಿದ ಗಮನಾರ್ಹ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಸನ್ನಿ ಥಾಮಸ್ ಅವರ ಮಾರ್ಗದರ್ಶನದಲ್ಲಿ ಭಾರತವು ಶೂಟಿಂಗ್‌ನಲ್ಲಿ ನೂರಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪದಕಗಳನ್ನು ಗಳಿಸಿತು. ಇದು ದೇಶದ ಕ್ರೀಡಾ ಇತಿಹಾಸದಲ್ಲಿ ಒಂದು ಅದ್ಭುತ ಅಧ್ಯಾಯವಾಗಿದೆ. ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರಿಗೆ ತರಬೇತಿ ನೀಡಿದವರು.
ಕೇರಳದ ಕೊಟ್ಟಾಯಂ ಜಿಲ್ಲೆಯ ಉಝವೂರಿನವರಾದ ಥಾಮಸ್, 1993 ರಿಂದ 2012 ರವರೆಗೆ 19 ವರ್ಷಗಳ ಕಾಲ ಭಾರತೀಯ ರಾಷ್ಟ್ರೀಯ ಶೂಟಿಂಗ್ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದರು. ಅವರು ಸ್ವತಃ ರೈಫಲ್ ಓಪನ್ ಸೈಟ್ ಈವೆಂಟ್‌ನಲ್ಲಿ ಮಾಜಿ ಭಾರತೀಯ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು ಮತ್ತು ಕೇರಳದಿಂದ ಬಂದ ಆರಂಭಿಕ ಚಾಂಪಿಯನ್‌ಗಳಲ್ಲಿ ಒಬ್ಬರು.
ಪೂರ್ಣ ಸಮಯ ತರಬೇತಿಗೆ ತಮ್ಮನ್ನು ಅರ್ಪಿಸಿಕೊಳ್ಳುವ ಮೊದಲು, ಥಾಮಸ್ ಉಳವೂರಿನ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಶೈಕ್ಷಣಿಕ ಕ್ಷೇತ್ರದಿಂದ ನಿವೃತ್ತರಾದ ನಂತರ, ಅವರು ಭಾರತೀಯ ಶೂಟಿಂಗ್‌ನ ಭವಿಷ್ಯವನ್ನು ರೂಪಿಸಲು ತಮ್ಮನ್ನು ತಾವು ತೊಡಗಿಸಿಕೊಂಡರು, ಅಂತಿಮವಾಗಿ ಅವರ ಕೊಡುಗೆಗಳಿಗಾಗಿ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಯನ್ನು ಪಡೆದರು.
ಅಂತಿಮ ವಿಧಿಗಳು : ಸನ್ನಿ ಥಾಮಸ್ ಅವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12 ಗಂಟೆಗೆ ಎಡಪ್ಪಳ್ಳಿಯ ಪೂಕ್ಕಟ್ಟುಪಾಡಿ ರಸ್ತೆಯ ತೇವಕ್ಕಲ್‌ನ ಸೇಂಟ್ ಮಾರ್ಟಿನ್ ಡಿ ಪೋರೆಸ್ ಚರ್ಚ್‌ನಲ್ಲಿ ನಡೆಯಲಿದೆ.
ಇಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಉಳವೂರಿನ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ. ನಾಳೆ ಬೆಳಿಗ್ಗೆ 9 ಗಂಟೆಯವರೆಗೆ ಉಳವೂರಿನ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ.