ದಾವಣಗೆರೆ : ಕತ್ತಲನ್ನು ಹೊಡೆದೋಡಿಸುವ ಶಕ್ತಿ ದೀಪಕ್ಕಿದೆ. ಆದರೆ ಜಗತ್ತಿನಲ್ಲಿ ತುಂಬಿದ್ದ ಅಸಮಾನತೆಯ ಕಗ್ಗತ್ತಲು, ಒಂದು ಜಾತಿ ಶ್ರೇಷ್ಠ. ಮತ್ತೊಂದು ಜಾತಿ ಕನಿಷ್ಠ ಎಂಬುದರ ವಿರುದ್ಧ 12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಹೋರಾಡಿದವರು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಎಂದು ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಆಶೀರ್ವಚನ ನೀಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ, ಬಸವಣ್ಣನವರು ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿಯಲ್ಲಿ ಶೋಷಣೆ, ಸ್ವಾತಂತ್ರ್ಯ, ಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಜಗಜ್ಯೋತಿ ಮಹಾನ್ ಪುರುಷ ಬಸವಣ್ಣ. ಹಾಗಾಗಿ ಅವರನ್ನು ವಿಶ್ವದ ಮೊದಲ ಸಮಾನತೆಯ ಹರಿಕಾರ, ಮಾನವ ಹಕ್ಕುಗಳ ಹೋರಾಟಗಾರ, ಮಹಾನ್ ಮಾನವತವಾದಿ ಎಂತಲೂ ಕರೆದಲ್ಲಿ ತಪ್ಪಗಲಾರದು. ಇಂತಹ ವ್ಯಕ್ತಿಗೆ ಸರ್ಕಾರ ಸಾಂಸ್ಕೃತಿಕ ನಾಯಕ ಹಾಗೂ ಜನತೆ ವಿಶ್ವಗುರು ಎಂದು ಗೌರವಿಸಿದೆ.
ತಮ್ಮ ಕಾಯಕ ದಾಸೋಹದ ಮೂಲಕ ಕಾಯಕ ತತ್ವವನ್ನು ಜಗತ್ತಿಗೆ ಸಾರಿದ ಅವರು, ಕಾಯಕ ತತ್ವದಲ್ಲಿ ಮೇಲು-ಕೀಳೆಂಬುದಿಲ್ಲ. ಕಾಯಕದಿಂದ ಮಾತ್ರ ಬದುಕು ಹಸನಾಗಲು ಸಾಧ್ಯ. ಆದ್ದರಿಂದ ವ್ರತ ನಿಂತರೂ, ಕಾಯಕ ಸೇವೆ ನಿಲ್ಲಬಾರದು. ಕಾಯಕ ದಾಸೋಹ ನಿಷ್ಠೆಯಿಂದಲೇ ಆತ್ಮ ತೃಪ್ತಿ ಹೊಂದಬೇಕು. ಇಂತಹ ಮಹಾನ್ ವ್ಯಕ್ತಿತ್ವವುಳ್ಳ ಜಗಜ್ಯೋತಿ ಬಸವ ತತ್ವಗಳನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಶಾಂತಿ, ಸುವ್ಯವಸ್ಥೆ, ಪ್ರೀತಿ-ಸಹಬಾಳ್ವೆಯಿಂದ ಬಾಳಲು ಸಾಧ್ಯ. ಇವರ ತತ್ವಾದರ್ಶಗಳು ಇಂದಿನ ಪೀಳಿಗೆಗೆ ಅತ್ಯಗತ್ಯ ಎಂದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ವಿಶ್ವದಲ್ಲಿ ಕಾಯಕ ದಾಸೋಹದ ಮೂಲಕ ತನ್ನದೇ ಆದಂತಹ ಛಾಪು ಮೂಡಿಸಿದ ಮಹಾನ್ ದಾರ್ಶನಿಕ ವಿಶ್ವಗುರು ಬಸವಣ್ಣ, ಶರಣ ಬಸವೇಶ್ವರರು 12ನೇ ಶತಮಾನದ ಅನುಭವ ಮಂಟಪದಲ್ಲಿ ಎಲ್ಲಾ ಸಮಾಜದ ಶರಣ, ಶರಣೆಯರನ್ನು ಒಳಗೊಂಡಿತ್ತು. ಅದರಂತೆ ಮುಂಬರುವ ದಿನಗಳಲ್ಲಿ ಎಲ್ಲಾ ಸಮಾಜ ಹಾಗೂ ಶರಣರ ಸಮಾಗಮದೊಂದಿಗೆ ಆಚರಣೆ ಮಾಡಿದಲ್ಲಿ ಅದು ಇನ್ನೂ ಅರ್ಥಪೂರ್ಣ. ಬಸವಣ್ಣನವರು ಸಮಾಜಕ್ಕೆ ನೀಡಿದ ಅಪಾರ ಕೊಡುಗೆ ಸಮಾಜಕ್ಕೆ ಮಾದರಿ, ಇದಕ್ಕಾಗಿ ಸರ್ಕಾರ “ವಿಶ್ವಗುರು ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿದೆ. ಬಸವಣ್ಣನವರು ಅಜ್ಞಾನದಿಂದ, ಜ್ಞಾನದ ಕಡೆಗೆ ಕರೆತಂದ ಸಾಂಸ್ಕೃತಿ ನಾಯಕ ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಲು, 12ನೇ ಶತಮಾನದಲ್ಲಿ ಅವರು ಮೂಡನಂಬಿಕೆ, ಅಸಮಾನತೆ, ವಿರುದ್ಧ ಹೋರಾಡಿದ ನೇತಾರ, ಬಸವಣ್ಣನವರು ಹೇಳಿದಂತೆ “ಧಯವೇ ಧರ್ಮದ ಮೂಲವಯ್ಯಾ” ಎಂಬ ವಚನವನ್ನು ಅರ್ಥ ಮಾಡಿಕೊಡಲ್ಲಿ ಪ್ರತಿಯೊಬ್ಬರು ಶಾಂತಿ, ಸುವ್ಯವಸ್ಥೆಯಿಂದ ಜೀವನ ಸಾಗಿಸಬಹುದು. ಬಸವಣ್ಣ ಸೇರಿದಂತೆ ಪ್ರಥಮ ಬಸವಾಧಿ ಶರಣರು ನಡೆದು ಬಂದ ಹಾದಿಯನ್ನು ಅನುಸರಿಸಿದಲ್ಲಿ, ನಾಡು-ನುಡಿ, ದೇಶ- ವಿದೇಶಗಳು ಸಹ ಶಾಂತಿಯುತವಾಗಿ ಅಭಿವೃದ್ಧಿಯ ಪಥದತ್ತ ಸಾಗಲಿವೆ. ಲಂಡನ್‌ನ ರಾಜ, ರಾಣೀಯರ ಆಳ್ವಿಕೆ ಪರಂಪರೆಯಾಗಿದ್ದು, ಅಲ್ಲಿನ ಅಥೆನ್ಸ್ ನಗರದಲ್ಲಿ ಕಲಬುರಗಿ ನೀರಜ್ ಪಾಟಿಲ್‌ರವರು ಬಸವಣ್ಣನವರ ಪ್ರತಿಮೆಯನ್ನು ಸ್ಥಾಪಿಸಿರುವುದು ಹೆಮ್ಮೆಯ ಸಂಗತಿ. ಸಮಾಜದಲ್ಲಿನ ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಸವಾದಿಶರಣರು ಸಾರಿದ ಮಾನವತೆ, ಮಾನವಧರ್ಮ ಮುಂತಾದ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಎಂ. ಸಂತೋಷ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಸೆನೆಟ್ ಸದಸ್ಯ ಪ್ರಶಾಂತ್, ಎಂ.ಶಿವಕುಮಾರ್, ಪರಮೇಶ್ವರಪ್ಪ ಸೇರದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಸವ ಕಲಾ ಲೋಕ ತಂಡದಿಂದ ಗೀತಗಾಯನ ಪ್ರಸ್ತುತಪಡಿಸಿದರು.