ಬಾಲಘಾಟ್ : ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ಹುಲಿಯೊಂದು 50 ವರ್ಷದ ವ್ಯಕ್ತಿಯನ್ನು ಕೊಂದು ಹಾಕಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕಾಶ್ ಪಾಣೆ ತಿರೋಡಿ ಎಂಬಾತ ಪೊಲೀಸ್ ಠಾಣೆ ವ್ಯಾಪ್ತಿಯ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬೆಳಿಗ್ಗೆ 5 ಗಂಟೆ ಸುಮಾರಿಗೆ ಹುಲಿ ಅವರ ಮೇಲೆ ದಾಳಿ ಮಾಡಿದೆ ಎಂದು ಅರಣ್ಯ ಉಪವಿಭಾಗಾಧಿಕಾರಿ ಬಿ.ಎಲ್. ಸಿರ್ಸಮ್ ತಿಳಿಸಿದ್ದಾರೆ.
ಆ ವ್ಯಕ್ತಿಯ ಕಿರುಚಾಟ ಕೇಳಿ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿ, ಅದನ್ನು ಓಡಿಸಲು ಕಲ್ಲು ತೂರಾಟ ನಡೆಸಿದ್ದಾರೆ. ಆ ಸಮಯದಲ್ಲಿ ಹುಲಿ ತಪ್ಪಿಸಿಕೊಂಡಿದೆ ಎನ್ನಲಾಗಿದೆ. ದಾಳಿಯ ನಂತರ, ಎರಡು ತಿಂಗಳ ಹಿಂದೆಯೇ ಆ ಪ್ರದೇಶದಲ್ಲಿ ಹುಲಿಯ ಉಪಸ್ಥಿತಿಯ ಬಗ್ಗೆ ತಾವು ನೀಡಿದ ದೂರುಗಳನ್ನು ಅರಣ್ಯ ಸಿಬ್ಬಂದಿ ಗಮನಿಸಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು ಎನ್ನಲಾಗಿದೆ.
ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಟಂಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಭಯಾರಣ್ಯದ ಅಧಿಕಾರಿಗಳ ತಂಡ ಹುಲಿಗಾಗಿ ಶೋಧಕಾರ್ಯ ಮುಂದುವರಿಸಿದೆ.